ಬಂಗ್ಲಗುಡ್ಡೆ: ತ್ವಯ್ಬಾ ಗಾರ್ಡನ್‌ನಲ್ಲಿ ಸ್ವಲಾತ್ ವಾರ್ಷಿಕೋತ್ಸವ
ಕಾರ್ಕಳ, ಮಾ.15: ಬಂಗ್ಲಗುಡ್ಡೆಯ ಸರ್ ಹಿಂದ್ ಇಸ್ಲಾಮಿಕ್ ಅಕಾಡಮಿಯ ಆಶ್ರಯದಲ್ಲಿ ತ್ವಯ್ಬಾ ಗಾರ್ಡನ್‌ನಲ್ಲಿ ಆಯೋಜಿಸಿದ್ದ ಸ್ವಲಾತ್ ವಾರ್ಷಿಕೋತ್ಸವ ಕಾರ್ಯಕ್ರಮ ರವಿವಾರ ಜರುಗಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇಂಡಿಯನ್ ಗ್ರಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಮಾತನಾಡಿ, ‘ಮನುಷ್ಯನ ಚಿಂತನೆಗಳಿಗೂ ಅನೂಹ್ಯವಾದ ರೀತಿಯಲ್ಲಿ, ಭೂಮಿ ಆಕಾಶಗಳಲ್ಲಿ ಸಮರ್ಥವಾದ ರೀತಿಯಲ್ಲಿ ಕುರ್‌ಆನ್ ರೂಪುಗೊಂಡಿದ್ದು ಅಲ್ಲಾಹನ ಆಜ್ಞೆ, ನಿಯಮ, ನೀತಿಬೋಧನೆ, ಇಹ ಮತ್ತು ಪರಲೋಕಗಳ ಮಾರ್ಗದರ್ಶಕವಾಗಿದೆ. ವ್ಯತಿರಿಕ್ತ ಮನಸ್ಥಿತಿಯಿಂದ ಕುರ್‌ಆನಿನಲ್ಲಿ ಮಾನವನ ಹಸ್ತಕ್ಷೇಪವನ್ನು ಇಸ್ಲಾಮ್ ದೇವ ಮಾರ್ಗದರ್ಶನದಂತೆ ನಿಷೇಧಿಸಿದೆ. ಪವಿತ್ರ ಗ್ರಂಥದ ರಕ್ಷಣೆಯ ಜವಾಬ್ದಾರಿಯನ್ನೂ ಅಲ್ಲಾಹನೇ ನಿಭಾಯಿಸುತ್ತಾನೆ’ ಎಂದರು.
ಎಂ.ಎಸ್.ಎಂ.ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಮಾತನಾಡಿ ‘ಶೈಕ್ಷಣಿಕ ರಂಗದಲ್ಲಿ ಶ್ರೇಷ್ಠ ಪ್ರಯತ್ನಗಳು ಕಳೆದ ದಶಕಗಳಲ್ಲಿ ಅಮೂಲಾಗ್ರ ಬದಲಾವಣೆಗಳಿಗೆ ಕಾರಣವಾಗಿದ್ದು, ಮುಸ್ಲಿಮರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್‌ಹಿಂದ್ ಇಸ್ಲಾಮಿಕ್ ಅಕಾಡಮಿಯ ಪರಿಶ್ರಮ ಗಮನಾರ್ಹ’ ಎಂದರು.
ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಧಾರ್ಮಿಕ ಉಪನ್ಯಾಸ ನೀಡಿದರು.
ಸರ್ ಹಿಂದ್ ಇಸ್ಲಾಮಿಕ್ ಅಕಾಡಮಿಯ ಸಂಚಾಲಕ ಅಸ್ಸೈಯದ್ ಅಬ್ದರ್ರಹ್ಮಾನ್ ಸಾದಾತ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಶಾಕಿರ್ ಹಾಜಿ ಮಂಗಳೂರು, ಉಡುಪಿ ಜಿಲ್ಲಾ ಸಹಾಯಕ ಖಾಝಿ ಅಬ್ದುರ್ರಹ್ಮಾನ್ ಮದನಿ ಮೂಳೂರು, ಎಸ್ ವೈಎಸ್ ರಾಜ್ಯ ಕಾರ್ಯದರ್ಶಿ ಕೆ.ಎಂ.ಅಬೂಬಕರ್ ಸಿದ್ದೀಕ್, ಅಬೂ ಸುಫ್ಯಾನ್ ಎಚ್.ಐ., ಇಬ್ರಾಹೀಂ ಮದನಿ ಮೂಡುಬಿದಿರೆ, ಆಲೂರು ಮರ್ಕಝ್ ಮಿಸ್ಕಾತುಲ್ ಹಸನಾತ್‌ನ ಅಧ್ಯಕ್ಷ ಅಸ್ಸೈಯದ್ ಜಾಬಿರ್ ತಂಙಳ್, ಹೊಸ್ಮಾರು ಜಮಾಅತ್ ಅಧ್ಯಕ್ಷ ಎಂ.ಎಚ್.ಸುಲೈಮಾನ್ ಸಅದಿ ಅಲ್ ಅಫ್ಳಲಿ, ಹೊಸ್ಮಾರು ಖತೀಬ್ ಉಮರ್ ಸಅದಿ ಅಲ್ ಅಫ್ಳಲಿ, ಮುಹಮ್ಮದ್ ಹಾಜಿ ಬಂಗ್ಲೆಗುಡ್ಡೆ, ಅಶ್ಫಾಕ್ ಅಹ್ಮದ್, ರಜಬ್ ಹಾಜಿ ಬಂಗ್ಲೆಗುಡ್ಡೆ, ಆಸಿಫ್ ಆಪತ್ಬಾಂದವ ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಾಂಶುಪಾಲ ಶರೀಫ್ ಸಅದಿ ಅಲ್ ಕಾಮಿಲ್ ಕಿಲ್ಲೂರು ಸ್ವಾಗತಿಸಿದರು. ತ್ವಯ್ಬಾ ಗಾರ್ಡನ್ ಕಾರ್ಯದರ್ಶಿ ಮುಹಮ್ಮದ್ ಶರೀಫ್ ವಂದಿಸಿದರು.