×
Ad

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಮಂಗಳೂರು ವಿಭಾಗದಲ್ಲಿ 20 ಕೋಟಿ ರೂ. ಸಂಗ್ರಹ: ವಿಎಚ್‌ಪಿ

Update: 2021-03-15 19:51 IST

ಮಂಗಳೂರು, ಮಾ.15: ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳಲಿರುವ ಶ್ರೀರಾಮ ಮಂದಿರಕ್ಕೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮತ್ತು ಕೊಡಗು ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಿಭಾಗದಲ್ಲಿ 20 ಕೋಟಿ ದೇಣಿಗೆ ಸಂಗ್ರಹ ಆಗಿದೆ ಎಂದು ವಿಶ್ವ ಹಿಂದೂ ಪರಿಷತ್ ವಿಭಾಗದ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

ನಗರದ ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಿಂದ 250 ಕೋಟಿ ರೂ. ಸಂಗ್ರಹ ಆಗಿರುವ ಮಾಹಿತಿ ಇದೆ. ಇನ್ನು ವಿಶ್ವ ಹಿಂದೂ ಪರಿಷತ್ ಮಂದಿರಕ್ಕಾಗಿ ದೇಣಿಗೆ ಸಂಗ್ರಹ ಮಾಡುವುದಿಲ್ಲ. ದೇಣಿಗೆ ನೀಡಲು ಅಪೇಕ್ಷೆ ಪಡುವವರು ನೇರವಾಗಿ ಅದಕ್ಕಾಗಿ ರಚಿಸಿರುವ ಟ್ರಸ್ಟಿನ ಬ್ಯಾಂಕ್ ಖಾತೆಗೆ ಕಳುಹಿಸಿಕೊಡಬಹುದಾಗಿದೆ ಎಂದು ಹೇಳಿದರು.

ಮಾ.21ಕ್ಕೆ ಕದ್ರಿ ದೇವಳದಿಂದ ಪಾದಯಾತ್ರೆ: ಹಿಂದೂ ಶ್ರದ್ಧಾ ಕೇಂದ್ರಗಳನ್ನು ಅಪವಿತ್ರಗೊಳಿಸುವ ದುಷ್ಕೃತ್ಯಗಳು ನಿರಂತರ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಮಾ.21ರಂದು ಬೆಳಗ್ಗೆ 6 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ಕ್ಷೇತ್ರದಿಂದ ಕುತ್ತಾರು ಕೊರಗಜ್ಜನ ಆದಿ ಕ್ಷೇತ್ರಕ್ಕೆ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಕೊರಗಜ್ಜನ ಆದಿ ಕ್ಷೇತ್ರದಲ್ಲಿ ಪೂರ್ವಾಹ್ನ 11 ಗಂಟೆಗೆ ಧಾರ್ಮಿಕ ಸಭೆ ಏರ್ಪಡಿಸಲಾಗಿದೆ ಎಂದು ಶರಣ್ ಪಂಪ್‌ವೆಲ್ ತಿಳಿಸಿದ್ದಾರೆ.

ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ ಧಾರ್ಮಿಕ ಸಭೆಯಲ್ಲಿ ಮಾರ್ಗದರ್ಶನ ಮಾಡುವರು. ವಿಭಾಗ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿವಿಧ ಕ್ಷೇತ್ರಗಳ ಪ್ರಮುಖರು ಮತ್ತು ಧಾರ್ಮಿಕ ಮುಂದಾಳುಗಳು ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ವಿವರಿಸಿದರು.

ಕಂಕನಾಡಿ ಗರೋಡಿ, ಅತ್ತಾವರ ಬಾಬುಗುಡ್ಡೆ ದೈವಸ್ಥಾನ, ಪಂಪುವೆಲ್‌ನ ಕಲ್ಲುರ್ಟಿ ಕಲ್ಕುಡ ದೈವಸ್ಥಾನ, ಉಜ್ಜೋಡಿ ಮಹಾಕಾಳಿ ದೈವಸ್ಥಾನ, ಬೊಕ್ಕಪಟ್ಣದ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಅಯ್ಯಪ್ಪ ದೈವಸ್ಥಾನ, ದಡ್ಡಲಕಾಡ್ ಬಬ್ಬುಸ್ವಾಮಿ ದೈವಸ್ಥಾನ, ಸೂಟರ್‌ಪೇಟೆಯ ಬಬ್ಬುಸ್ವಾಮಿ ದೈವಸ್ಥಾನ, ಕದ್ರಿ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ, ಕುದ್ರೋಳಿಯ ಶ್ರೀರಾಮ ಭಜನಾ ಮಂದಿರ, ಕೊಣಾಜೆಯ ಗೋಪಾಲಕೃಷ್ಣ ಮಂದಿರ ಮೊದಲಾದ ಕ್ಷೇತ್ರಗಳನ್ನು ಅಪವಿತ್ರಗೊಳಿಸುವ ಪ್ರಯತ್ನಗಳು ನಡೆದಿವೆ ಎಂದು ಶರಣ್ ವಿವರಿಸಿದರು.

ಧರ್ಮ ವಿರೋಧಿ ಬರಹಗಳನ್ನು ಬರೆದಿರುವುದನ್ನು, ಅಸಹ್ಯ ಹುಟ್ಟಿಸುವ ವಸ್ತುಗಳನ್ನು ಹಾಕಿ ಅಪವಿತ್ರಗೊಳಿಸುವ ಕೃತ್ಯಗಳನ್ನು ನಡೆಸಿರುವುದನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಗಮನಕ್ಕೆ ತರಲಾಗಿದೆ. ಆದರೆ ಯಾವುದೇ ಕ್ರಮ ಈ ತನಕ ಆಗಿಲ್ಲ ಎಂದವರು ದೂರಿದರು.

ಕ್ಷೇತ್ರಗಳ ರಕ್ಷಣೆಗೆ ಸಮಿತಿ: ಮಾ.9ರಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಲಯದಲ್ಲಿ ಮಂಗಳೂರು ಮಹಾನಗರದ ಎಲ್ಲ ದೇವಸ್ಥಾನ, ದೈವಸ್ಥಾನ, ಭಜನಾ ಮಂದಿರಗಳ ಪ್ರಮುಖರ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರ ಸಂರಕ್ಷಣಾ ಸಮಿತಿ ರಚಿಸಲಾಗಿದೆ. ಗೌರವಾಧ್ಯಕ್ಷರಾಗಿ ರವೀಂದ್ರನಾಥ ರೈ, ಅಧ್ಯಕ್ಷರಾಗಿ ಸುಂದರ ಆಚಾರ್ಯ, ಪ್ರಧಾನ ಕಾರ್ಯದರ್ಶಿಯಾಗಿ ವಿಜಯಕಿರಣ್ ಕೊಟ್ಟಾರಿ ಆಯ್ಕೆಯಾಗಿದ್ದಾರೆ. ಸಲಹೆಗಾರರಾಗಿ ಜಪ್ಪುಗುಡ್ಜೆಗುತ್ತು ಭುಜಂಗ ಶೆಟ್ಟಿ, ಉಪಾಧ್ಯಕ್ಷರಾಗಿ ರವೀಂದ್ರ ಮುನ್ನಿಪ್ಪಾಡಿ, ಸದಾಶಿವ ಶೆಟ್ಟಿ ಕಾವೂರು, ಬಾಬು ಮಾಡೂರು, ವಸಂತ ಕಿಣಿ ಉಳ್ಳಾಲ, ಜಯರಾಮ ಶೆಟ್ಟಿ ಇರಾ ಆಯ್ಕೆಗೊಂಡಿದ್ದಾರೆ ಎಂದು ಶರಣ್ ವಿವರಿಸಿದರು.

ಸಭೆಯಲ್ಲಿ ಕ್ಷೇತ್ರಗಳಿಗೆ ಸಿಸಿಟಿವಿ ಹಾಕುವಂತೆ ಮತ್ತು ಹುಂಡಿಯನ್ನು ಆಗಾಗ ತೆರೆಯುವಂತೆ ತಿಳಿಸಲಾಗಿದೆ. ಕೆಲವೊಂದು ಕ್ಷೇತ್ರಗಳಲ್ಲಿ ಆರ್ಥಿಕ ಅಡಚಣೆ ಇದೆ. ಅಂತಹ ಕ್ಷೇತ್ರಗಳಿಗೆ ಸಿಸಿಟಿವಿ ಅಳವಡಿಸಲು ಧಾರ್ಮಿಕ ದತ್ತಿ ಸಚಿವರ ಮೂಲ ಸಹಾಯ ಧನ ಒದಗಿಸಿಕೊಡುವಂತೆ ವಿನಂತಿಸಲು ನಿರ್ಧರಿಸಲಾಗಿದೆ ಎಂದು ಶರಣ್ ಪಂಪುವೆಲ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾಧ್ಯಕ್ಷ ಗೋಪಾಲ ಕುತ್ತಾರು, ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ವಿಭಾಗದ ಸಂಚಾಲಕ ಭುಜಂಗ ಕುಲಾಲ್ ಮತ್ತು ಜಿಲ್ಲಾ ಸೇವಾ ಪ್ರಮುಖ್ ಪ್ರವೀಣ್ ಕುತ್ತಾರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News