×
Ad

ಹೆಜಮಾಡಿ ಟೋಲ್: ಸರ್ವಿಸ್ ಬಸ್ ಗಳಿಗೆ ರಿಯಾಯಿತಿ ದರಕ್ಕೆ ಟೋಲ್ ಸಂಸ್ಥೆ ಒಪ್ಪಿಗೆ

Update: 2021-03-15 20:01 IST

ಪಡುಬಿದ್ರಿ: ಹೆಜಮಾಡಿ ಟೋಲ್‍ನಲ್ಲಿ ಸರ್ವಿಸ್ ಬಸ್ ಗಳಿಗೆ ರಿಯಾಯಿತಿ ದರ ನೀಡಲು ಟೋಲ್ ಸಂಸ್ಥೆ ಒಪ್ಪಿದ್ದು, ಮಂಗಳವಾರದಿಂದ ಬಸ್ಸು ಯಥಾಸ್ಥಿತಿ ಸಂಚಾರ ನಡೆಸಲಿದೆ. ರಿಯಾಯಿತಿ ದರದಂತೆ ಬಸ್ಸು ಮಾಲಕರು ಎಲ್ಲಾ ಬಸ್ಸುಗಳ ತಿಂಗಳ ದರವನ್ನು ಒಮ್ಮೆಲೆ ಭರಿಸಿದ್ದು, ಹೆಜಮಾಡಿ ಒಳ ರಸ್ತೆಯಲ್ಲಿ ಸಂಚಾರಕ್ಕೆ ಅನುಮತಿ ನೀಡಲಾಗಿದೆ.

ಸರ್ವಿಸ್ ಬಸ್ಸುಗಳಿಗೆ ಟೋಲ್ ರಿಯಾಯಿತಿಯನ್ನು ರದ್ದುಗೊಳಿಸಿ ಟೋಲ್ ಸಂಗ್ರಹ ಮಾಡುವುದನ್ನು ವಿರೋಧಿಸಿ ಕೆನರಾ ಷಟಲ್ ಬಸ್ಸು ಮಾಲಕರ ಸಂಘದ ನೇತೃತ್ವದಲ್ಲಿ ಸೋಮವಾರ ಹೆಜಮಾಡಿ ಒಳ ರಸ್ತೆಯಲ್ಲಿ ಸಂಚರಿಸುವ ಸುಮಾರು 40 ಷಟಲ್ ಬಸ್ಸುಗಳು ಸಂಚಾರ ಸ್ಥಗಿತಗೊಳಿಸಿ ಟೋಲ್‍ಗೇಟ್ ಮುಂಭಾಗದಲ್ಲಿ ಬಸ್ಸು ಮಾಲಕರು, ಚಾಲಕರು ಹಾಗೂ ಟೋಲ್ ವಿರೋಧಿ ಹೋರಾಟ ಸಮಿತಿಯವರು ಹೆಜಮಾಡಿ ಟೋಲ್ ಗೇಟ್ ಬಳಿ ಜಮಾಯಿಸಿದ್ದರು.

ಹೆಜಮಾಡಿ ಒಳ ರಸ್ತೆಯ ಟೋಲ್ ಬಳಸಿ ಸಂಚರಿಸುವ ಷಟಲ್ ಬಸ್ಸುಗಳಿಗೆ ಫಾಸ್ಟ್ ಟ್ಯಾಗ್ ಕಡ್ಡಾಯಕ್ಕೆ ಮುನ್ನ ಉಚಿತ ಸಂಚಾರಕ್ಕೆ ಅವಕಾಶವಿತ್ತು. ಆದರೆ ಫಾಸ್ಟ್ ಟ್ಯಾಗ್ ಕಡ್ಡಾಯದ ಬಳಿಕ ಎಲ್ಲಾ ಬಸ್ಸುಗಳಿಗೆ ದುಬಾರಿ ದರ ವಿಧಿಸಲಾಗಿತ್ತು. ಇದನ್ನು ವಿರೋಧಿಸಿ ಬಸ್ಸು ಮಾಲಕರು ಜಿಲ್ಲಾಧಿಕಾರಿ, ಜನಪ್ರತಿನಿಧಿಗಳು ಮತ್ತು ಟೋಲ್ ಸಂಸ್ಥೆಗೆ ಹಲವು ಮನವಿ ಮಾಡಿತ್ತು. ಆದರೆ ಯಾವುದೇ ರೀತಿಯಲ್ಲಿ ಟೋಲ್ ಸಂಸ್ಥೆ ರಿಯಾಯಿತಿಗೆ ಒಪ್ಪದ ಕಾರಣ ಸೋಮವಾರದಿಂದ ಅನಿರ್ಧಿಷ್ಠಾವಧಿವರೆಗೆ ಬಸ್ಸು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಟೋಲ್ ಸಮಸ್ಯೆ ಇತ್ಯರ್ಥವಾಗದೆ ಬಸ್ಸುಗಳನ್ನು ಅನಿರ್ಧಿಷ್ಠಾವಧಿವರೆಗೆ ಸಂಚಾರ ಸ್ಥಗಿತಕ್ಕೆ ನಿರ್ಧರಿಸಿದ್ದು, ಮಂಗಳವಾರದಿಂದ ಎಕ್ಸ್ ಪ್ರೆಸ್ ಬಸ್ ಗಳ ಸಂಚಾರವನ್ನೂ ಸ್ಥಗಿತಗೊಳಿಸುವುದಾಗಿ ಎಚ್ಚರಿಸಿದ್ದರು.

ಕಳೆದ 3 ದಿನಗಳಿಂದ ಟೋಲ್ ಮ್ಯಾನೇಜರ್ ಶಿವಪ್ರಸಾದ್ ಶೆಟ್ಟಿ ಮತ್ತು ಬಶೀರ್‍ರವರು ಟೋಲ್ ಸಮಸ್ಯೆ ಇತ್ಯರ್ಥಕ್ಕೆ ನವಯುಗ್ ಕೇಂದ್ರ ಕಛೇರಿಯ ಮುಖ್ಯಸ್ಥರೊಂದಿಗೆ ಚರ್ಚಿಸುತ್ತಿದ್ದರೂ ಸಮಸ್ಯೆಗೆ ಪರಿಹಾರ ಸಿಕ್ಕಿರಲಿಲ್ಲ. 

ಕೆನರಾ ಬಸ್ ಮಾಲಕ ಸಂಘದ ಉಪಾಧ್ಯಕ್ಷ ದುರ್ಗಾಪ್ರಸಾದ್ ಹೆಗ್ಡೆ, ಕಾರ್ಯದರ್ಶಿ ಸುರೇಶ್ ಕುಮಾರ್ ಕುಯಿಲಾಡಿ, ಸಂಘದ ಪದಾಧಿಕಾರಿಗಳಾದ ರಾಜೇಶ್ ಶೆಟ್ಟಿ, ಸಂದೇಶ್ ಮರೋಲಿ, ದಿನೇಶ್ ಆರ್.ಕೆ., ನಿಶಾಂತ್, ನಾಗೇಶ್, ಅಬ್ದುಲ್ ಹಮೀದ್, ಟೋಲ್ ಹೋರಾಟ ಸಮಿತಿಯ ಸಂಚಾಲಕ ಶೇಖರ್ ಹೆಜ್ಮಾಡಿ, ಹೆಜಮಾಡಿ ನಾಗರಿಕ ಕ್ರಿಯಾ ಸಮಿತಿಯ ಅಧ್ಯಕ್ಷ ಸುಧಾಕರ ಕರ್ಕೇರ ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News