ಮಹಿಳಾ ದಿನಾಚರಣೆಯಂದು ಮಂಡಿಸಿರುವ ಬಜೆಟ್‌ನಲ್ಲಿ ಮಹಿಳಾ ವಿರೋಧಿ ನೀತಿ: ಸುಶೀಲಾ ನಾಡ
ಉಡುಪಿ, ಮಾ.15: ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಅಂಗನವಾಡಿ ನೌಕರರ ಬೇಡಿಕೆಗಳನ್ನು ಪರಿಶೀಲಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗ ನವಾಡಿ ನೌಕರರ ಸಂಘ(ಸಿಐಟಿಯು) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಹಮ್ಮಿಕೊಳ್ಳಲಾಗಿತ್ತು.
ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಈ ಬಾರಿಯ ಸರಕಾರ ಬಜೆಟ್‌ನಲ್ಲಿ ವೀರಶೈವ ಮಠಕ್ಕೆ 500ಕೋಟಿ ರೂ. ಮೀಸಲಿರಿಸಿದೆ. ಆದರೆ ಅಂಗನವಾಡಿ ನೌಕರರ 339ಕೋಟಿ ರೂ. ಬೇಡಿಕೆ ಈಡೇರಿಸಲು ಸರಕಾರಕ್ಕೆ ಸಾಧ್ಯವಾಗಿಲ್ಲ. ಮಠಕ್ಕೆ ನೀಡಲು ಹಣ ಇರುವ ಸರಕಾರಕ್ಕೆ ದುಡಿಯುವ ವರ್ಗಕ್ಕೆ ನೀಡಲು ಹಣ ಇಲ್ಲ ಎಂದು ಹೇಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.
ಸಂಘದ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುಶೀಲಾ ನಾಡ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಸೇವಾ ಜೇಷ್ಠತೆಯ ಆಧಾರದಲ್ಲಿ 153.25ಕೋಟಿ, ಮಿನಿ ಅಂಗ ನವಾಡಿ ಕೇಂದ್ರಗಳ ಸಹಾಯಕಿ ನೇಮಕಾತಿಗೆ 6.99ಕೋಟಿ ರೂ., ಅಂಗನ ವಾಡಿ ಸಹಾಯಕಿಯರಿಗೆ ಸಂಬಳದ ವ್ಯಾತ್ಯಾಸ ಮೊತ್ತ 131.42ಕೋಟಿ ರೂ., ನಿವೃತ್ತಿ ಸೌಲಭ್ಯಕ್ಕೆ 47.82 ಕೋಟಿ ರೂ. ಶಿಫಾರಸ್ಸು ಮಾಡಲಾಗಿತ್ತು. ಆದರೆ ರಾಜ್ಯ ಸರಕಾರ ಈ ಶಿಫಾರಸ್ಸುಗಳಲ್ಲಿ ಯಾವುದೇ ಒಂದು ಅಂಶವನ್ನು ರಿಗಣನೆ ಮಾಡಿಲ್ಲ ಎಂದು ದೂರಿದರು.
ಹೆಸರಿಗೆ ಮಾತ್ರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಬಜೆಟ್ ಮಂಡಿಸಿ, ಮಹಿಳಾ ವಿರೋಧಿ ನೀತಿ ಅನುಸರಿಸಲಾಗಿದೆ. ಇಲಾಖೆಯ ಶಿಫಾರಸ್ಸುಗಳನ್ನು ಬಜೆಟ್ ಅಂತಿಮಗೊಳಿಸುವಾಗ ಸೇರ್ಪಡೆ ಮಾಡಬೇಕು. ಇಲ್ಲದಿದ್ದರೆ ಹೆಚ್ಚುವರಿ ಕೆಲಸಗಳನ್ನು ಬಹಿಷ್ಕರಿಸಲಾಗುವುದು ಮತ್ತು ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಸಹಾಯಕಿಯನ್ನು ಕೊಡುವ ತನಕ ಅಡುಗೆ ಮಾಡುವುದಿಲ್ಲ ಎಂದು ಅವರು ತಿಳಿಸಿದರು.
ಈ ಕುರಿತ ಮನವಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಮೂಲಕ ಇಲಾಖಾ ಸಚಿವೆ ಶಶಿಕಲಾ ಜೊಲ್ಲೆ ಅವರಿಗೆ ಸಲ್ಲಿಸಲಾಯಿತು.
ಧರಣಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಭಾರತಿ, ಉಡುಪಿ ತಾಲೂಕು ಅಧ್ಯಕ್ಷೆ ಅಂಬಿಕಾ, ಕಾಪು ಅಧ್ಯಕ್ಷೆ ಲೀಲಾ, ಕುಂದಾಪುರ ಅಧ್ಯಕ್ಷೆ ಆಶಾಲತಾ, ಬ್ರಹ್ಮಾವರ ಅಧ್ಯಕ್ಷೆ ಜಯಲಕ್ಷ್ಮೀ, ಸಿಐಟಿಯು ತಾಲೂಕು ಕಾರ್ಯ ದರ್ಶಿ ಕವಿರಾಜ್, ಮುಖಂಡ ಮೋಹ್ ಮೊದಲಾದವರು ಉಪಸ್ಥಿತರಿದ್ದರು.