×
Ad

ಅನುದಾನಿತ ಶಾಲೆಗಳನ್ನು ಬಲಪಡಿಸುವುದು ಸರಕಾರದ ಜವಾಬ್ದಾರಿ: ಪ್ರೊ.ನರಹರಿ ರಾವ್

Update: 2021-03-15 20:20 IST

ಉಡುಪಿ, ಮಾ.15: ಸರಕಾರ ಮಾಡಬೇಕಾದ ಕೆಲಸವನ್ನು ಅಚ್ಚುಕಟ್ಟಾಗಿ ಸಾಮಾಜಿಕ ನ್ಯಾಯದ ಜವಾಬ್ದಾರಿಯನ್ನು ಅನುದಾನಿತ ಶಾಲೆಗಳು ಮಾಡುತ್ತಾ ಬಂದಿವೆ. ಅವುಗಳನ್ನು ಬಲಪಡಿಸುವುದು ಸರಕಾರದ ಜವಾಬ್ದಾರಿ. ಹೊಸ ದೃಷ್ಠಿಕೋನದೊಂದಿಗೆ ಶಿಕ್ಷಣ ಕ್ಷೇತ್ರದ ಸಾಧಕ ಸಂಸ್ಥೆಗಳನ್ನು ಸುದೃಢಗೊಳಿಸಬೇಕಾಗಿದೆ ಎಂದು ವಿಶ್ರಾಂತ ಪ್ರಾಂಶುಪಾಲ ಪ್ರೊ.ಎ.ಎಂ.ನರಹರಿರಾವ್ ಹೇಳಿದ್ದಾರೆ.

ಬೆಂಗಳೂರು ಪತ್ರಕರ್ತರ ವೇದಿಕೆ ಇದರ ಉಡುಪಿ ಜಿಲ್ಲಾ ಘಟಕದ ವತಿಯಿಂದ ಉಡುಪಿ ಜಗನ್ನಾಥ ಭವನದಲ್ಲಿ ರವಿವಾರ ಆಯೋಜಿಸಲಾದ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಉಳಿಸಿ ಎಂಬ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

ಕರಾವಳಿಯ ಶೈಕ್ಷಣಿಕ ಇತಿಹಾಸದ ಪುಟಗಳನ್ನು ನೋಡಿದರೆ ಅನುದಾನಿತ ಶಾಲಾ ಕಾಲೇಜುಗಳ ಕೊಡುಗೆ ಎದ್ದು ಕಾಣುತ್ತಿದೆ. ಶಿಕ್ಷಕರ ನೇಮಕಾತಿ ಸಹಿತ ತಾರತಮ್ಯಗಳನ್ನು ಸರಕಾರ ಮಾಡುತ್ತಾ ಬಂದಿರುವುದರಿಂದ ಅನೇಕ ಸಂಸ್ಥೆಗಳು ಮುಚ್ಚಿವೆ. ಇನ್ನೂ ಅನೇಕ ಸಂಸ್ಥೆಗಳು ತೊಂದರೆ ಅನುಭವಿಸುತ್ತಿವೆ. ಇದಕ್ಕೆಲ್ಲ ಒಂದು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ಎ.ನರಸಿಂಹ ಪಂಚನಬೆಟ್ಟು, ತುಳುಕೂಟದ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿದರು. ಪತ್ರಕರ್ತರ ವೇದಿಕೆಯ ಜಿಲ್ಲಾಧ್ಯಕ್ಷ ಡಾ.ಶೇಖರ ಅಜೆಕಾರು ಅಧ್ಯಕ್ಷತೆ ವಹಿಸಿದ್ದರು. ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ಹಿರಿಯ ಉಪನ್ಯಾಸಕ ಮಂಜಪ್ಪದ್ಯಾ.ಗೋಣಿ ಮತ್ತು ಸಚ್ಚೇಂದ್ರ, ಪಿಪಿಸಿ ಕಾಲೇಜಿನ ಆಂಗ್ಲ ವಿಭಾಗದ ಮುಖ್ಯಸ್ಥೆ ಸುಮನಾ ರಾಜೇಂದ್ರ, ಎಂಜಿಎಂ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ನವ್ಯಶ್ರೀ ಮುಖ್ಯ ಅತಿಥಿಗಳಾಗಿದ್ದರು.

ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ಕಾರ್ಯದರ್ಶಿ ಸೌಮ್ಯಶ್ರೀ ಎಸ್.ಅಜೆಕಾರು, ಸಮಿತಿಯ ಮಕ್ಕಳ ವಿಭಾಗದ ಸುನಿಧಿ ಮತ್ತು ಸುನಿಜ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಗೋರೂರು ಘಟಕದ ಸಂಚಾಲಕಿ ರೇಶ್ಮಾ ಶೆಟ್ಟಿ, ಯುವ ಸಾಧಕಿ ಕಾವ್ಯಾ ಕಣಂಜಾರು, ಕಾರ್ಮಿಕ ಕವಿ ಈರಣ್ಣ ಕುರುವತ್ತಿಗೌಡರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News