ಗ್ರಾಹಕರ ಹಕ್ಕುಗಳ ರಕ್ಷಣೆಗೆ ಒತ್ತು ನೀಡಿ: ನ್ಯಾಯಧೀಶೆ ಕಾವೇರಿ
ಉಡುಪಿ, ಮಾ.15: ಗ್ರಾಹಕರು ತಮ್ಮ ದೈನಂದಿನ ಕಾರ್ಯಗಳಿಗೆ ವಸ್ತುಗಳನ್ನು ಖರೀದಿಸಿ ಕೊಂಡೊಯ್ಯುವಾಗ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಕೆ ಮಾಡದೆ ಗ್ರಾಹಕರಿಗಿರುವ ಹಕ್ಕುಗಳ ರಕ್ಷಣೆಗೆ ಒತ್ತು ನೀಡಬೇಕೆಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದ್ದಾರೆ.
ಸೋಮವಾರ ನಗರದ ಅಂಬಲಪಾಡಿ ಶ್ರೀಮಹಾಕಾಳಿ ಜನಾರ್ದನ ದೇವಸ್ಥಾನದ ಭವಾನಿ ಮಂಟಪದಲ್ಲಿ ಜಿಲ್ಲಾ ಆಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಜಿಲ್ಲಾ ವಾರ್ತಾ ಇಲಾಖೆ, ಕಾನೂನು ಮಾಪನಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ಹಾಗೂ ಗ್ರಾಹಕ ಮಾಹಿತಿ ಕೇಂದ್ರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿಶ್ವ ಗ್ರಾಹಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಗ್ರಾಹಕರ ಹಿತರಕ್ಷಣೆಗೆ ಸರಕಾರ ಗ್ರಾಹಕರ ರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿದೆ. ಗ್ರಾಹಕರು ಸೇವೆ ಅಥವಾ ವಸ್ತುಗಳನ್ನು ಖರೀದಿಸುವಾಗ ತಮಗಾದ ಅನ್ಯಾಯದ ಬಗ್ಗೆ ರಕ್ಷಣೆ ಪಡೆಯುವ ಉದ್ಧೇಶದಿಂದ ಇದನ್ನು ಜಾರಿಗೆ ತಂದಿದ್ದು, ತಮಗೆ ಅನ್ಯಾಯವಾದಾಗ ಇದರ ಸಧ್ಬಳಕೆ ಮಾಡಬೇಕು ಎಂದರು.
ಪ್ರತಿವರ್ಷ ಆಚರಿಸುವಂತೆ ವಿಶ್ವ ಗ್ರಾಹಕರ ದಿನಾಚರಣೆಯನ್ನು ಈ ಬಾರಿ 'ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ' ಎಂಬ ಘೋಷಣಾ ವಾಕ್ಯದೊಂದಿಗೆ ಆಚರಿಸಲಾಗುತ್ತದೆ. ಸಾರ್ವಜ ನಿಕರು ತಮ್ಮ ದಿನನಿತ್ಯದ ಪ್ರತಿಯೊಂದು ಕಾರ್ಯದಲ್ಲಿಯೂ ಅನಿವಾರ್ಯವಾಗಿ ಪ್ಲಾಸ್ಟಿಕ್‌ನ ಬಳಕೆಗೆ ಒಗ್ಗಿಹೋಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಪ್ಲಾಸ್ಟಿಕ್ ತ್ಯಾಜ್ಯಗಳಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ಇದೊಂದು ನಶಿಸಿ ಹೋಗದಂತಹ ವಸ್ತು ಆಗಿದೆ ಎಂದರು.
ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್ ಮಾತನಾಡಿ, ಗ್ರಾಹಕರ ಹಕ್ಕುಗಳ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸುವುದರೊಂದಿಗೆ ಅದನ್ನು ತಮಗೆ ಅನ್ಯಾಯವಾದಾಗ ಬಳಸುವಂತೆ ಉತ್ತೇಜಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಉಡುಪಿ ನಗರಸಭಾ ವ್ಯಾಪ್ತಿಯನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಇಲ್ಲಿನ ಪ್ರಜ್ಞಾವಂತ ನಾಗರಿಕರು ಇದಕ್ಕೆ ಕೈ ಜೋಡಿಸಬೇಕು ಎಂದ ಅವರು, ಪ್ರತಿದಿನ ಕಸದ ಗಾಡಿಗಳಿಗೆ ಕಸವನ್ನು ನೀಡುವಾಗ ಒಣ ಮತ್ತು ಹಸಿ ಕಸವನ್ನು ಬೇರ್ಪಡಿಸಿ ನೀಡಬೇಕು ಎಂದರು.
ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಶೋಭಾ ಸಿ.ಎ ಮಾತನಾಡಿ, ಗ್ರಾಹಕ ತಾನು ಖರೀದಿಸಿದ ಉತ್ಪನ್ನ ಅಥವಾ ಸೇವೆ ನ್ಯಾಯ ಸಮ್ಮತ, ಸುರಕ್ಷಿತ ಹಾಗೂ ಉತ್ತಮ ಮಟ್ಟದಾಗಿರಬೇಕು. ಇವುಗಳಲ್ಲಿ ದೋಷ ಕಂಡು ಅನ್ಯಾಯವಾದಾಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರನ್ನು ಸಲ್ಲಿಸಬಹುದು ಎಂದರು.
ಗ್ರಾಹಕ ವಸ್ತುಗಳನ್ನು ಉತ್ಪಾದಕರಿಂದ ಖರೀದಿ ಮಾಡುವಾಗ ತಪ್ಪದೇ ಬಿಲ್ಲನ್ನು ಪಡೆಯಬೇಕು. ವಾರೆಂಟಿ ಇದ್ದಲ್ಲಿ ಆ ಬಗ್ಗೆ ಕಾರ್ಡ್‌ನ್ನು ಅಂಗಡಿಯ ಮೊಹರು ಹಾಗೂ ಸಹಿಯೊಂದಿಗೆ ಪಡೆಯಬೇಕು. ಆಗ ವಾತ್ರ ಗ್ರಾಹಕ ಮತ್ತು ಕೊಳ್ಳುವವನ ಮಧ್ಯೆ ಕರಾರು ಆದಂತಾಗಿ ಗ್ರಾಹಕ ತಮಗಾದ ಅನ್ಯಾಯದ ವಿರುದ್ಧ ಪ್ರಶ್ನಿಸಲು ಅನುಕೂಲವಾಗುತ್ತದೆ ಎಂದರು.
ಇತ್ತೀಚಿನ ದಿನಗಳಲ್ಲಿ ಮೆಡಿಕಲ್ ವಿಮೆಯನ್ನು ಮಾಡಿಸುವಾಗ ವಿಮಾ ಕಂಪೆನಿಗಳು ತನ್ನ ಒಪ್ಪಂದದ ಮಾಹಿತಿಯನ್ನು ನಿಖರವಾಗಿ ಗ್ರಾಹಕರಿಗೆ ತಿಳಿಸದೇ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚು ಹೆಚ್ಚು ಕಂಡು ಬರುತ್ತಿವೆ ಎಂದ ಅವರು, ಈ ಬಗ್ಗೆ ಗ್ರಾಹಕರು ಎಚ್ಚರ ವಹಿಸಬೇಕು ಎಂದರು.
ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಸಂಚಾಲಕ ಎ.ಪಿ. ಕೊಡಂಚ ಗ್ರಾಹಕ ರಕ್ಷಣೆ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ಮುಹಮ್ಮದ್ ಇಸಾಕ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕ ಗಜೇಂದ್ರ ವಿ.ಎಡಕೆ, ಉಡುಪಿ ತಾಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಮತ್ತಿತರರು ಉಪಸ್ಥಿತರಿದ್ದರು. ಉಡುಪಿ ಬಳಕೆದಾರರ ವೇದಿಕೆಯ ಟ್ರಸ್ಟಿ ಎ. ಲಕ್ಷ್ಮೀಬಾಯಿ ನಿರೂಪಿಸಿ, ಶಾಂತರಾಜ್ ಐತಾಳ್ ವಂದಿಸಿದರು.