ನೆದರ್‌ಲ್ಯಾಂಡ್ಸ್: ಆ್ಯಸ್ಟ್ರಝೆನೆಕ ಲಸಿಕೆಗೆ 2 ವಾರ ತಡೆ

Update: 2021-03-15 15:03 GMT

  ದ ಹೇಗ್ (ನೆದರ್‌ಲ್ಯಾಂಡ್ಸ್), ಮಾ. 15: ಡೆನ್ಮಾರ್ಕ್, ನಾರ್ವೆ, ಐರ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್ ದೇಶಗಳಲ್ಲಿ ‘ಸಂಭಾವ್ಯ ಅಡ್ಡ ಪರಿಣಾಮಗಳು’ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ, ಆ್ಯಸ್ಟ್ರಝೆನೆಕ ಕೊರೋನ ವೈರಸ್ ಲಸಿಕೆಯ ಬಳಕೆಯನ್ನು ಎರಡು ವಾರಗಳ ಕಾಲ ತಡೆಹಿಡಿಯಲಾಗಿದೆ ಎಂದು ನೆದರ್‌ಲ್ಯಾಂಡ್ಸ್‌ನ ಆರೋಗ್ಯ ಅಧಿಕಾರಿಗಳು ರವಿವಾರ ತಿಳಿಸಿದ್ದಾರೆ.

‘‘ಲಭ್ಯವಿರುವ ಹೊಸ ಮಾಹಿತಿಗಳ ಆಧಾರದಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಜನರಿಗೆ ಆ್ಯಸ್ಟ್ರಝೆನೆಕ ಲಸಿಕೆ ನೀಡುವುದನ್ನು ನಿಲ್ಲಿಸಲು ನೆದರ್‌ಲ್ಯಾಂಡ್ಸ್‌ನ ಆರೋಗ್ಯ ಪ್ರಾಧಿಕಾರ ಸಲಹೆ ನೀಡಿದೆ. ಈ ಅವಧಿಯಲ್ಲಿ ಲಸಿಕೆಯ ಸಾಧಕ-ಬಾಧಕಗಳ ಬಗ್ಗೆ ತನಿಖೆ ನಡೆಸಲಾಗುವುದು’’ ಎಂದು ಆರೋಗ್ಯ ಸಚಿವಾಲಯ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಆಸ್ಟ್ರಝೆನೆಕ ಲಸಿಕೆ ಸ್ವೀಕರಿಸಿದವರ ಪೈಕಿ ಕೆಲವರಲ್ಲಿ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಾಣಿಸಿಕೊಂಡ ಬಳಿಕ, ಕೆಲವು ಐರೋಪ್ಯ ದೇಶಗಳು ಲಸಿಕೆಯ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿವೆ.

ರಕ್ತ ಹೆಪ್ಪುಗಟ್ಟುವುದಕ್ಕೆ ಪುರಾವೆಯಿಲ್ಲ: ಆ್ಯಸ್ಟ್ರಝೆನೆಕ

ಈವರೆಗೆ ಆ್ಯಸ್ಟ್ರಝೆನೆಕ ಲಸಿಕೆಗಳನ್ನು ತೆಗೆದುಕೊಂಡವರ ಅಂಕಿಅಂಶಗಳನ್ನು ಅಧ್ಯಯನ ಮಾಡಲಾಗಿದ್ದು, ಲಸಿಕೆ ತೆಗೆದುಕೊಂಡರೆ ರಕ್ತ ಹೆಪ್ಪುಗಟ್ಟುತ್ತದೆ ಎನ್ನುವ ವಾದಕ್ಕೆ ಪುರಾವೆ ಲಭಿಸಿಲ್ಲ ಎಂದು ಆ್ಯಸ್ಟ್ರಝೆನೆಕ ಔಷಧ ತಯಾರಿಕಾ ಕಂಪೆನಿ ರವಿವಾರ ಹೇಳಿದೆ.

ಬ್ರಿಟನ್ ಮತ್ತು ಐರೋಪ್ಯ ಒಕ್ಕೂಟದಲ್ಲಿ ಈವರೆಗೆ ಆ್ಯಸ್ಟ್ರಝೆನೆಕ ಲಸಿಕೆ ತೆಗೆದುಕೊಂಡಿರುವ ಸುಮಾರು 1.7 ಕೋಟಿಗೂ ಅಧಿಕ ಮಂದಿಯ ಅಂಕಿಅಂಶಗಳ ವಿಶ್ಲೇಷಣೆ ಮಾಡಲಾಗಿದೆ ಎಂದು ಅದು ತಿಳಿಸಿದೆ.

  ಅದೇ ವೇಳೆ, ರಕ್ತ ಹೆಪ್ಪುಗಟ್ಟಿದ ಪ್ರಕರಣಗಳು ಲಸಿಕೆಯಿಂದ ಸಂಭವಿಸಿವೆ ಎನ್ನುವುದನ್ನು ತೋರಿಸುವ ಪುರಾವೆಗಳಿಲ್ಲ ಎಂದು ಯುರೋಪಿಯನ್ ಮೆಡಿಸಿನ್ಸ್ ಏಜನ್ಸಿ ಹೇಳಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News