ಮಾಸ್ಕ್ ಬಳಕೆ ಕಡ್ಡಾಯಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸಿಎಂ ಸೂಚನೆ

Update: 2021-03-15 16:49 GMT

ಉಡುಪಿ, ಮಾ.15: ಕೋವಿಡ್ ಎರಡನೇ ಅಲೆಗೆ ಪ್ರಾರಂಭದಲ್ಲೇ ಕಡಿವಾಣ ಹಾಕುವ ಪ್ರಯತ್ನವಾಗಿ ರಾಜ್ಯಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸುವಂತೆ, ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಇಂದು ಸಂಜೆ ನಡೆಸಿದ ಕೋವಿಡ್-19ರ ಟಾಸ್ಕ್‌ಫೋರ್ಸ್ ಸಮಿತಿಯ ವಿಡಿಯೋ ಸಂವಾದ ಸಭೆಯಲ್ಲಿ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರಿಗೆ ಮುಖ್ಯಮಂತ್ರಿಗಳು ಈ ಸೂಚನೆ ನೀಡಿದರು.

ಸಭೆಯಲ್ಲಿ ಕೋವಿಡ್-19ರ ಪ್ರಸಕ್ತ ಸ್ಥಿತಿಗತಿಯ ಕುರಿತು ಸುಧೀಘ ಚರ್ಚೆ ನಡೆಸಲಾಯಿತು. ಕೋವಿಡ್-19ರ ನಿಯಂತ್ರಣಕ್ಕಾಗಿ ಕೆಲವು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಪ್ರಸ್ತುತ ವಿದ್ಯಾಮಾನದ ಹಿನ್ನೆಲೆಯಲ್ಲಿ ಅನಿವಾರ್ಯ ಎಂಬ ಅಭಿಪ್ರಾಯಕ್ಕೆ ಬರಲಾಯಿತು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಸಲಹೆಯಂತೆ ಜಿಲ್ಲೆಯಲ್ಲಿ ಕೋವಿಡ್-19 ಸೋಂಕನ್ನು ತಡೆಗಟ್ಟಲು ಈ ಕೆಳಗಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಬಳಕೆ ಕಡ್ಡಾಯ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ, ಬಸ್‌ಗಳು, ರೈಲು, ಸಿನಿಮಾ ಥಿಯೇಟರ್, ಮಾಲ್, ಮಾರುಕಟ್ಟೆಗಳಂಥ ಜನನಿಬಿಡ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಲು ಆದ್ಯತೆ ನೀಡಬೇಕು.

ಇವುಗಳನ್ನು ಪಾಲಿಸದವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದಂಡ ವಿಧಿಸಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಸಭೆ, ಸಮಾರಂಭಗಳಲ್ಲಿ ಜನರ ಪಾಲ್ಗೊಳ್ಳುವಿಕೆ ಕುರಿತಂತೆ ಸರಕಾರ ಇತ್ತೀಚೆಗೆ ಹೊರಡಿಸಿದ ಆದೇಶವನ್ನು ಪಾಲಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲು, ಕಾನೂನು ಕ್ರಮ ತೆಗೆದುಕೊಳ್ಳಬೇಕು. ಮಹಾರಾಷ್ಟ್ರ, ಕೇರಳದಿಂದ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ 72 ಗಂಟೆಯೊಳಗೆ ಮಾಡಿದ ಆರ್‌ಟಿಪಿಸಿಆರ್ ವರದಿ ಕಡ್ಡಾಯ.
ಎಲ್ಲಾ ಪಾಸಿಟಿವ್ ಸಂಪರ್ಕಿತರಿಗೆ, ಕೋವಿಡ್ ಸೋಂಕಿನ ಲಕ್ಷಣ ಇರುವವರಿಗೆ, ಬೇರೆ ರಾಜ್ಯಗಳಿಂದ ಪ್ರಯಾಣಿಸಿದವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ, 60 ವರ್ಷ ಮೇಲಿನ ಹಿರಿಯರು, 45ರಿಂದ 59ವರ್ಷದೊಳಗಿನ ಅನ್ಯ ರೋಗವಿರುವವರು ಆದ್ಯತೆ ಮೇಲೆ ಕೋವಿಡ್-19 ಲಸಿಕೆಯ ಎರಡು ಡೋಸ್‌ಗಳನ್ನು ಸರಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬೇಕು.

ಕೋವಿಡ್-19 ಎರಡನೇ ಅಲೆಯನ್ನು ತಡೆಯಲು ಅಗತ್ಯ ಕ್ರಮ ಜರಗಿಸಲು ಸಾಂಕ್ರಾಮಿಕ ರೋಗ ಕಾಯ್ದೆ 2020ರಡಿಯಲ್ಲಿ ಪ್ರದತ್ತವಾದ ಯಾವುದೇ ಅಧಿಕಾರವನ್ನು ಚಲಾಯಿಸಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಸ್ವಾಯತ್ತೆ ನೀಡುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು ಎಂದು ಜಿ.ಜಗದೀಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News