ಪಾಕಿಸ್ತಾನದ ಶೋಚನೀಯ ಮಾನವ ಹಕ್ಕುಗಳ ದಾಖಲೆ ಗಮನಿಸುವಂತೆ ವಿಶ್ವಸಂಸ್ಥೆಗೆ ಭಾರತದ ಆಗ್ರಹ

Update: 2021-03-16 15:05 GMT
ಫೋಟೊ ಕೃಪೆ : twitter.com

ಜಿನಿವಾ,ಮಾ.16: ಪಾಕಿಸ್ತಾನದ ಶೋಚನೀಯ ಮಾನವ ಹಕ್ಕುಗಳ ದಾಖಲೆ ಮತ್ತು ಅಲ್ಪಸಂಖ್ಯಾತ ಗುಂಪುಗಳತ್ತ ಅದರ ತಾರತಮ್ಯಗಳ ಕಡೆಗೆ ತುರ್ತಾಗಿ ಗಮನವನ್ನು ಹರಿಸುವಂತೆ ಭಾರತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (ಯುಎನ್‌ಎಚ್‌ಆರ್‌ಸಿ)ಯನ್ನು ಆಗ್ರಹಿಸಿದೆ. ಸೋಮವಾರ ಯುಎನ್‌ಎಚ್‌ಆರ್‌ಸಿಯ 46ನೇ ಅಧಿವೇಶನದಲ್ಲಿ ಮಾತನಾಡಿದ ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ಪವನ್ ಬಧೆ ಅವರು,ಪಾಕಿಸ್ತಾನವನ್ನು ಅದರ ಘೋರ,ಸರಕಾರಿ ಪ್ರಾಯೋಜಿತ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ಉತ್ತರದಾಯಿಯನ್ನಾಗಿಸಬೇಕು ಎಂದು ಹೇಳಿದರು. ಭಾರತದ ವಿರುದ್ಧ ದುರುದ್ದೇಶಪೂರಿತ ಮತ್ತು ಸುಳ್ಳು ಪ್ರಚಾರಕ್ಕಾಗಿ ಪಾಕಿಸ್ತಾನವನ್ನು ಅವರು ಟೀಕಿಸಿದರು.

ಪಾಕಿಸ್ತಾನದಲ್ಲಿ ಸಾವಿರಾರು ಬಲವಂತದ ನಾಪತ್ತೆ ಪ್ರಕರಣಗಳು ನಡೆದಿವೆ ಎಂದ ಅವರು,ಸಂತ್ರಸ್ತ ಗುಂಪುಗಳು ಹೇಳುವಂತೆ 2000ರಿಂದ ಬಲೂಚಿಸ್ತಾನದಿಂದ ಸಾವಿರಾರು ಜನರು ನಾಪತ್ತೆಯಾಗಿದ್ದಾರೆ. ಹೀಗೆ ನಾಪತ್ತೆಯಾಗಿರುವವರ ಕುಟುಂಬಗಳು ಈಗಲೂ ನ್ಯಾಯಕ್ಕಾಗಿ ಮೊರೆಯಿಡುತ್ತಿವೆ. ಕಳೆದ ತಿಂಗಳು ಈ ಕುಟುಂಬಗಳ ನೂರಾರು ಬೆಂಬಲಿಗರು ಇಸ್ಲಾಮಾಬಾದ್‌ನಲ್ಲಿ ಧರಣಿಯನ್ನು ನಡೆಸಿದ್ದಾರೆ. ಬಲೂಚಿಸ್ತಾನ್ ಈಗ ‘ನಾಪತ್ತೆಯಾದವರ ನಾಡು’ ಎಂದೇ ಹೆಸರಾಗಿದೆ ಎಂದರು.

ಪಾಕಿಸ್ತಾನದಲ್ಲಿ ಕರಾಳ ಕಾನೂನುಗಳಡಿ ದೈವನಿಂದೆಯ ಆರೋಪಗಳು ಕಳವಳಕಾರಿಯಾಗಿ ಹೆಚ್ಚುತ್ತಿವೆ ಎಂದು ಎಚ್ಚರಿಕೆಯ ಗಂಟೆಯನ್ನು ಮೊಳಗಿಸಿದ ಬಧೆ,2020 ಸೆಪ್ಟೆಂಬರ್‌ನಲ್ಲಿ ಕರಾಚಿಯಲ್ಲಿ 30,000ಕ್ಕೂ ಅಧಿಕ ಜನರು ಸಮಾವೇಶಗೊಂಡು ಶಿಯಾ ಮುಸ್ಲಿಮರನ್ನು ಧರ್ಮದ್ರೋಹಿಗಳು ಮತ್ತು ದೈವನಿಂದಕರು ಎಂದು ಘೋಷಿಸುವಂತೆ ಆಗ್ರಹಿಸಿ ಅವರ ಶಿರಚ್ಛೇದನ ಮಾಡುವಂತೆ ಕರೆ ನೀಡಿದ್ದರು. ಈ ವರ್ಷದ ಜನವರಿಯಲ್ಲಿ ಶಿಯಾ ಹಝರಾ ಸಮುದಾಯದ 11 ಗಣಿ ಕಾರ್ಮಿಕರ ಹತ್ಯೆಯು ಪಾಕಿಸ್ತಾನದಲ್ಲಿ ಶಿಯಾಗಳ ವಿರುದ್ಧ ನಡೆಯುತ್ತಿರುವ ಸರಣಿ ಹಿಂಸಾಚಾರದಲ್ಲಿ ಇತ್ತೀಚಿನ ಪ್ರಕರಣವಾಗಿದೆ ಎಂದು ಹೇಳಿದರು.

ಸರಕಾರ ಮತ್ತು ಉಗ್ರವಾದಿಗಳಿಂದ ನಡೆಯುತ್ತಿರುವ ಶೋಷಣೆಯನ್ನು ಪ್ರಮುಖವಾಗಿ ಬಿಂಬಿಸಲು ಪಾಕಿಸ್ತಾನದಲ್ಲಿಯ ಮಾಧ್ಯಮಗಳು ಹೆದರಿಕೊಂಡಿವೆ ಎಂದ ಅವರು,ಪಾಕಿಸ್ತಾನಿ ಸೇನೆಯ ವಿರುದ್ಧ ಮಾತನಾಡುವವರ ನಾಲಿಗೆಗಳನ್ನು ಬುಡಸಹಿತ ಕತ್ತರಿಸಬೇಕು ಎಂದು ಅಲ್ಲಿಯ ಸಚಿವರೋರ್ವರು ಬಹಿರಂಗವಾಗಿ ಹೇಳಿದ್ದರು. ಪಾಕಿಸ್ತಾನದಲ್ಲಿ ಕರಾಳ ಕಾನೂನುಗಳಡಿ ಸಾಮಾಜಿಕ ಹೋರಾಟಗಾರರನ್ನು ಗುರಿಯಾಗಿಸಿಕೊಳ್ಳಲಾಗುತ್ತಿದೆ ಮತ್ತು ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗುತ್ತಿದೆ ಎಂದರು.

ಪಾಕಿಸ್ತಾನವು ಇತರರಿಗೆ ಬೋಧನೆ ಮಾಡುವುದನ್ನು ನಿಲ್ಲಿಸಬೇಕು ಮತ್ತು ದೇಶದಲ್ಲಿ ಸಂಕಷ್ಟದಲ್ಲಿರುವ ತನ್ನ ಕೋಟ್ಯಂತರ ಜನರ ಬಗ್ಗೆ ತನಗಿರುವ ಹೊಣೆಗಾರಿಕೆಯ ಬಗ್ಗೆ ಗಮನವನ್ನು ಹರಿಸಬೇಕು ಎಂದೂ ಬಧೆ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News