ಎರಡು ದಿನದೊಳಗೆ ಪೊಲೀಸರ ವಿರುದ್ಧ ಕ್ರಮ‌ ಜರುಗಿಸದಿದ್ದರೆ ಉಳ್ಳಾಲ ಠಾಣೆಗೆ‌ ಮುತ್ತಿಗೆ: ಸರ್ವ ವಿದ್ಯಾರ್ಥಿಗಳ‌ ಒಕ್ಕೂಟ

Update: 2021-03-17 09:12 GMT

‌ಮಂಗಳೂರು : ಶಿಕ್ಷಣದ ಬಗ್ಗೆ ಜಾಗೃತಿ‌ ಮೂಡಿಸಿ ಹಿಂದಿರುಗುತ್ತಿದ್ದ ವೇಳೆ ಗಾಂಜಾ, ಮದ್ಯ‌ವ್ಯಸನಿಗಳು ಮೂವರು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸಿದ್ದಲ್ಲದೆ, ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಕೂಡ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿದ್ದಾರೆ. ಹಾಗಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಪೊಲೀಸರ ಮೇಲೆ 48 ಗಂಟೆಯೊಳಗೆ ಕಠಿಣ ಕ್ರಮ ಜರುಗಿಸದಿದ್ದರೆ ಉಳ್ಳಾಲ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲಾಗುವುದು ಎಂದು ಸರ್ವ ವಿದ್ಯಾರ್ಥಿಗಳ ಒಕ್ಕೂಟದ ದ.ಕ. ಜಿಲ್ಲಾಧ್ಯಕ್ಷ ಮೇಘರಾಜ್ ಎಚ್ಚರಿಸಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಬೇಕಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಠಾಣೆಯೊಳಗೆ ಕೂಡಿ ಹಾಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಮರ್ಮಾಂಗಕ್ಕೆ ಬೂಟುಗಾಲಿನಿಂದ ಒದ್ದು ಧಾರ್ಮಿಕವಾಗಿ ನಿಂದಿಸಿದ್ದಾರೆ. ರಕ್ಷಣೆ, ನ್ಯಾಯ ನೀಡಬೇಕಿದ್ದ ಪೊಲೀಸರು ವಿದ್ಯಾರ್ಥಿಗಳನ್ನು ಚಿತ್ರಹಿಂಸೆ ನೀಡಿದ್ದಾರೆ. ಗಾಯವಾಗಿದ್ದರೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸದೆ ಅಮಾನೀಯವಾಗಿ ವರ್ತಿಸಿದ್ದಾರೆ.‌ ವಿದ್ಯಾರ್ಥಿಗಳ ಹೆತ್ತವರಿಗೂ ಭೇಟಿ ಮಾಡಲು ಅವಕಾಶ ನೀಡದೆ ಸುಮಾರು 24 ಗಂಟೆಗಳ ಕಾಲ ಕಸ್ಟಡಿಯಲ್ಲಿಟ್ಟು ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ ದೇಶದ್ರೋಹಿಗಳು ಎನ್ನುತ್ತಾ ಮಾನಸಿಕ ಹಿಂಸೆ ನೀಡಿದ್ದಾರೆ. ಹಾಗಾಗಿ ಉಳ್ಳಾಲ ಎಸ್ಸೈ ರೇವಣ್ಣ ಸಿದ್ದಪ್ಪ, ಎಎಸ್ಸೈ ಮಂಜಣ್ಣ, ಪಿಸಿ ರಮೇಶ್ ಮತ್ತಿತರ ಕರ್ತವ್ಯ ನಿರತ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಒಕ್ಕೂಟದ ಸದಸ್ಯ ಸಾದಿಕ್ ಬಜತ್ತೂರು ಮಾತನಾಡಿ ಈ ಬಗ್ಗೆ ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿದಾಗ ನ್ಯಾಯ‌ ನೀಡುವ ಭರವಸೆ ನೀಡಿದ್ದಾರೆ. ಒಂದು ವೇಳೆ ಕೊಟ್ಟ ಭರವಸೆ ಈಡೇರದಿದ್ದರೆ ತಪ್ಪಿತಸ್ಥ ಪೊಲೀಸರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ಪ್ರಕರಣ ದಾಖಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ರಾಝಿನ್, ಉಪಾಧ್ಯಕ್ಷ ಮುಸ್ತಫಾ, ಜೊತೆ ಕಾರ್ಯದರ್ಶಿ ಅಲ್ಫಾಝ್ ಹಮೀದ್, ಸದಸ್ಯರಾದ ಬಾಸಿತ್ ಆತೂರು, ಜಾಬಿರ್,  ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News