ಕೊರೋನದ ಎರಡನೇ ಅಲೆ ತಡೆಯುವ ಅಗತ್ಯವಿದೆ: ಸಿಎಂಗಳಿಗೆ ಪ್ರಧಾನಿ ಮೋದಿ ಕರೆ
ಹೊಸದಿಲ್ಲಿ: ಮೈಕ್ರೋ ಕಂಟೈನ್ ಮೆಂಟ್ ವಲಯಗಳು, ಪರೀಕ್ಷೆಗಳ ಹೆಚ್ಚಳ ಹಾಗೂ ಮಾಸ್ಕ್ ಸಹಿತ ಹಲವು ನಿರ್ಬಂಧಗಳನ್ನು ಜಾರಿಗೆ ತರುವ ಮೂಲಕ ಕೋವಿಡ್ ನ ಎರಡನೇ ಅಲೆಯನ್ನು ನಿಲ್ಲಿಸುವುದು ನಿರ್ಣಾಯಕವಾಗಿದೆ ಎಂದು ಕೆಲವು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ನಡೆಸಿದ ಆನ್ ಲೈನ್ ಸಭೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಸಲಹೆ ನೀಡಿದ್ದಾರೆ.
“ನಾವು ಈಗ ಸಾಂಕ್ರಾಮಿಕವನ್ನು ನಿಲ್ಲಿಸದಿದ್ದರೆ, ಅದು ದೇಶಾದ್ಯಂತ ಹರಡುತ್ತದೆ. ಕೊರೋನ ವೈರಸ್ ನ ಎರಡನೇ ಅಲೆಯನ್ನು ತಕ್ಷಣವೇ ನಿಲ್ಲಿಸಲು ಪ್ರಮುಖ ಹಾಗೂ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಮುಖ್ಯಮಂತ್ರಿಗಳಿಗೆ ತಿಳಿಸಿದರು.
ಕೊರೋನ ಹೋರಾಟದಲ್ಲಿ ನಾವು ಗಳಿಸಿರುವ ಆತ್ಮವಿಶ್ವಾಸವು ಅತಿಯಾದ ಆತ್ಮವಿಶ್ವಾಸಕ್ಕೆ ತಿರುಗಬಾರದು. ನಮ್ಮ ಯಶಸ್ಸು ಅಜಾಗರೂಕತೆಗೆ ಕಾರಣವಾಗಬಾರದು. ಜನರಲ್ಲಿ ಭೀತಿಯ ಸ್ಥಿತಿಯನ್ನು ಸೃಷ್ಟಿಸದೆ ಉಪಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.
ವಾಕ್ಸಿನೇಶನ್ ಸೆಂಟರ್ ಗಳನ್ನು ಹೆಚ್ಚಳ ಮಾಡಬೇಕು. ಮಾಸ್ಕ್ ಧರಿಸುವ ವಿಚಾರದಲ್ಲಿ ಕಠಿಣ ಕ್ರಮ ಅನಿವಾರ್ಯ. ಆರ್ ಟಿಪಿಸಿಆರ್ ಟೆಸ್ಟ್ ಸಾಮಥ್ರ್ಯ ಹೆಚ್ಚಿಸಬೇಕು. ಸಣ್ಣಪುಟ್ಟ ನಗರದಲ್ಲೂ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸಬೇಕು. ದೇಶದಲ್ಲಿ ಪ್ರತಿದಿನ 30 ಲಕ್ಷ ಜನರಿಗೆ ಲಸಿಕೆ ನೀಡಬೇಕು ಎಂದು ಮುಖ್ಯಮಂತ್ರಿಗಳ ಜತೆಗಿನ ಸಂವಾದದಲ್ಲಿ ಪ್ರಧಾನಿ ಹೇಳಿದ್ದಾರೆ.