ಆಧಾರ್ ಕಾರ್ಡ್ ಲಿಂಕ್ ಮಾಡಿಲ್ಲವೆಂದು 3 ಕೋಟಿ ರೇಷನ್ ಕಾರ್ಡ್ ರದ್ದುಪಡಿಸಿದ್ದು ಅತ್ಯಂತ ಗಂಭೀರ ವಿಚಾರ: ಸುಪ್ರೀಂಕೋರ್ಟ್

Update: 2021-03-17 17:36 GMT

ಹೊಸದಿಲ್ಲಿ, ಮಾ.17: ಆಧಾರ್‌ಗೆ ಜೋಡಣೆಯಾಗದ ಕಾರಣಕ್ಕೆ ಸುಮಾರು 3 ಕೋಟಿ ಪಡಿತರ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದು ಅತ್ಯಂತ ಗಂಭೀರ ವಿಷಯ ಎಂದು ಹೇಳಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಪ್ರತಿಕ್ರಿಯಿಸುವಂತೆ ಸೂಚಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ.

ಪಡಿತರ ಚೀಟಿ ರದ್ದಾಗಿರುವುದು ದುರದೃಷ್ಟಕರ ಎಂದು ಹೇಳಿ ಸುಮ್ಮನಿರುವಂತಿಲ್ಲ. ಇದೊಂದು ಅತ್ಯಂತ ಗಂಭೀರ ವಿಷಯವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ, ನ್ಯಾಯಮೂರ್ತಿಗಳಾದ ಎಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರಿದ್ದ ನ್ಯಾಯಪೀಠ ಹೇಳಿದೆ.

ಜಾರ್ಖಂಡ್‌ನ ಕೊಯಿಲಿ ದೇವಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡ ಸುಪ್ರೀಂಕೋರ್ಟ್, ಈ ವಿಷಯದ ಅಂತಿಮ ವಿಚಾರಣೆ ನಡೆಯಲಿದೆ ಎಂದು ಹೇಳಿ ತಕ್ಷಣ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. 2013ರ ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆಯಡಿ ಜಾರಿಗೊಳಿಸಿರುವ ಕುಂದುಕೊರತೆಗಳ ಪರಿಹಾರ ಕಾರ್ಯವಿಧಾನದ ಬಗ್ಗೆ 4 ವಾರದೊಳಗೆ ಮಾಹಿತಿ ನೀಡುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ರಾಜ್ಯಗಳ ಪ್ರತಿನಿಧಿ ನ್ಯಾಯವಾದಿಗಳಿಗೆ ನೋಟಿಸ್ ನೀಡಬಹುದು ಎಂದು ನ್ಯಾಯಪೀಠ ಹೇಳಿದೆ.

ಕೊಯಿಲಿ ದೇವಿ ಪರ ನ್ಯಾಯವಾದಿ ಕಾಲಿನ್ ಗೋನ್ಸಾಲ್ವಿಸ್, ಕೇಂದ್ರ ಸರಕಾರ 3 ಕೋಟಿಗೂ ಹೆಚ್ಚು ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿರುವುದರಿಂದ ತಮ್ಮ ಅರ್ಜಿಯು ದೊಡ್ಡ ಸಮಸ್ಯೆಗೆ ಸಂಬಂಧಿಸಿದ್ದಾಗಿದೆ ಎಂದರು.

ಇದನ್ನು ಆಕ್ಷೇಪಿಸಿದ ಸರಕಾರದ ಪ್ರತಿನಿಧಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅಮನ್ ಲೇಖಿ, ಕೇಂದ್ರ ಸರಕಾರ 3 ಕೋಟಿಗೂ ಹೆಚ್ಚು ರೇಷನ್ ಕಾರ್ಡ್ ರದ್ದುಗೊಳಿಸಿದೆ ಎಂಬುದು ಸುಳ್ಳು ಹೇಳಿಕೆ ಎಂದರು. ಕೇಂದ್ರ ಸರಕಾರಕ್ಕೆ ಈಗಾಗಲೇ ಆಧಾರ್ ಕಾರ್ಡ್ ವಿಷಯಕ್ಕೆ ಸಂಬಂಧಿಸಿದ ಅರ್ಜಿಯಲ್ಲಿ ನೋಟಿಸ್ ಜಾರಿಯಾಗಿದೆ ಎಂದು ಸುಪ್ರೀಂಕೋರ್ಟ್ ಹೇಳಿದಾಗ, ಈ ನೋಟಿಸ್‌ಗೆ ಕೇಂದ್ರ ಸರಕಾರ ಈಗಾಗಲೇ ಉತ್ತರಿಸಿದೆ ಎಂದು ಲೇಖಿ ಹೇಳಿದರು.

ಸಕ್ರಮ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣ ನೀಡಿ ಹಲವರಿಗೆ ಪಡಿತರ ಪೂರೈಸುತ್ತಿಲ್ಲ. ಇದರಿಂದ ಹಸಿವಿನಿಂದ ಸಾವನ್ನಪ್ಪುವ ಪ್ರಕರಣ ಸಂಭವಿಸಿದೆ ಎಂಬ ದೂರಿನ ಹಿನ್ನೆಲೆಯಲ್ಲಿ, ಈ ಬಗ್ಗೆ ಉತ್ತರಿಸುವಂತೆ ಸೂಚಿಸಿ 2019ರ ಡಿಸೆಂಬರ್ 9ರಂದು ಎಲ್ಲಾ ರಾಜ್ಯಗಳಿಗೆ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿತ್ತು. ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಯಾರಿಗೂ ಆಹಾರವಸ್ತು ನಿರಾಕರಿಸಲಾಗದು ಎಂದು ಸುಪ್ರೀಂಕೋರ್ಟ್ ಹೇಳಿತ್ತು.

ಸಕ್ರಮ ಆಧಾರ್ ಕಾರ್ಡ್ ಇಲ್ಲವೆಂಬ ಕಾರಣಕ್ಕೆ ಯಾರಿಗೂ ಪಡಿತರ ನಿರಾಕರಿಸಿಲ್ಲ ಮತ್ತು ಹಸಿವಿನಿಂದ ಯಾರು ಕೂಡಾ ಸಾವನ್ನಪ್ಪಿಲ್ಲ ಎಂದು ಮಾಹಿತಿ ಲಭಿಸಿರುವುದಾಗಿ ಈ ಹಿಂದೆ ಕೇಂದ್ರ ಸರಕಾರ ಪ್ರತಿಕ್ರಿಯಿಸಿತ್ತು.

ಹಸಿವೆಯಿಂದ ಸಾವನ್ನಪ್ಪಿದ್ದ ಪ್ರಕರಣ

ಅರ್ಜಿ ಸಲ್ಲಿಸಿರುವ ಕೋಯಿಲಿ ದೇವಿಯ 11 ವರ್ಷದ ಪುತ್ರಿ ಸಂತೋಷಿ 2018ರ ಸೆಪ್ಟೆಂಬರ್ 28ರಂದು ಜಾರ್ಖಂಡ್‌ನ ಸಿಮ್‌ಡೆಗಾ ಜಿಲ್ಲೆಯಲ್ಲಿ ಹಸಿವಿನಿಂದಾಗಿ ಪ್ರಾಣಬಿಟ್ಟಿದ್ದಳು. ಬಡ ದಲಿತ ಕುಟುಂಬದವರಾದ ಸಂತೋಷಿಯ ಮನೆಯವರು ತಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್‌ನೊಂದಿಗೆ ಜೋಡಿಸದ ಕಾರಣ ಅಧಿಕಾರಿಗಳು ರೇಷನ್ ಕಾರ್ಡ್ ರದ್ದು ಮಾಡಿದ್ದರು. ಆದ್ದರಿಂದ 2017ರ ಮಾರ್ಚ್‌ನಿಂದ ಕುಟುಂಬಕ್ಕೆ ಪಡಿತರ ಕೈತಪ್ಪಿದ್ದು ಮನೆಯವರೆಲ್ಲರೂ ಉಪವಾಸ ಬೀಳುವಂತಾಗಿತ್ತು ಎಂದು ಆರೋಪಿಸಲಾಗಿದೆ.

ಸಂತೋಷಿ ಮೃತಪಟ್ಟ ದಿನದಂದೂ ಇಡೀ ಕುಟುಂಬಕ್ಕೆ ಉಪ್ಪು ಬೆರೆಸಿದ ಚಹಾವೇ ಆಹಾರವಾಗಿತ್ತು. ಉಪ್ಪು ಮತ್ತು ಚಹಾಪುಡಿ ಹೊರತುಪಡಿಸಿ ಆ ಮನೆಯಲ್ಲಿ ಮತ್ಯಾವ ಆಹಾರ ವಸ್ತುವೂ ಇರಲಿಲ್ಲ . ಅದೇ ದಿನ ರಾತ್ರಿ ಹಸಿವೆ ತಡೆಯಲಾರದೆ ಸಂತೋಷಿ ಇಹಲೋಕ ತ್ಯಜಿಸಿದ್ದಾಳೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News