ಅಶೋಕ ವಿವಿ ಪ್ರೊಫೆಸರ್ ಹುದ್ದೆಗೆ ರಾಜೀನಾಮೆ ನೀಡಿದ ಪ್ರತಾಪ್ ಭಾನು ಮೆಹ್ತಾ
ಹೊಸದಿಲ್ಲಿ: ಅಶೋಕ ವಿಶ್ವವಿದ್ಯಾಲಯದ ಪ್ರೊಫೆಸರ್ ಹುದ್ದೆಗೆ ಖ್ಯಾತ ರಾಜಕೀಯ ಶಾಸ್ತ್ರಜ್ಞ ಮತ್ತು ವಿಶ್ಲೇಷಕ ಪ್ರತಾಪ್ ಭಾನು ಮೆಹ್ತಾ ರಾಜೀನಾಮೆ ನೀಡಿದ್ದಾರೆ. ಎರಡು ವರ್ಷಗಳ ಹಿಂದೆಯಷ್ಟೇ ಅವರು ವಿವಿಯ ಉಪಕುಲಪತಿ ಹುದ್ದೆ ತೊರೆದಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದೀಗ ಅವರ ರಾಜೀನಾಮೆಗೆ ಕಾರಣವೇನೆಂದು ತಿಳಿದು ಬಂದಿಲ್ಲ. ಆದರೆ ಮೆಹ್ತಾ ಅವರು ಕೇಂದ್ರದ ನರೇಂದ್ರ ಮೋದಿ ಸರಕಾರದ ಕಟು ಟೀಕಾಕಾರರೆಂದೇ ಗುರುತಿಸಲ್ಪಟ್ಟವರು ಎಂಬುದು ಉಲ್ಲೇಖನೀಯ.
ಮೆಹ್ತಾ ಅವರ ಬರಹಗಳು ಹಾಗೂ ಕೇಂದ್ರ ಸರಕಾರದ ವಿರುದ್ಧ ಅವರ ಟೀಕೆಯೇ ಅವರ ರಾಜೀನಾಮೆಗೆ ಕಾರಣವಾಗಿದೆಯೇ ಎಂಬ ಕುರಿತಾದ ಪ್ರಶ್ನೆಗೆ ವಿವಿ ಆಡಳಿತ ಪ್ರತಿಕ್ರಿಯಿಸಿಲ್ಲ.
ಈ ಕುರಿತಂತೆ ಟ್ವೀಟ್ ಮಾಡಿರುವ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ "ಅಶೋಕ ವಿವಿ ಇಲ್ಲಿಯ ತನಕ ಬಹಳ ಆಶಾಭಾವನೆ ಮೂಡಿಸಿತ್ತು. ಆದರೆ ಅದರ ಟ್ರಸ್ಟಿಗಳ ಪುಕ್ಕಲುತನದಿಂದ ಎಲ್ಲವೂ ನಿರುಪಯುಕ್ತವಾಗಿದೆ, ಬಗ್ಗಲು ಹೇಳಿದಾಗ ಅವರು ತೆವಳಲು ಆಯ್ಕೆ ಮಾಡಿದ್ದಾರೆ,'' ಎಂದು ಗುಹಾ ಬರೆದಿದ್ದಾರೆ.
ಮೆಹ್ತಾ ಕುರಿತಂತೆ ಮಾತನಾಡಿದ ವಿವಿಯ ಹಾಲಿ ಉಪಕುಲಪತಿ ಹಾಗೂ ಇಂಗ್ಲಿಷ್ ಪ್ರೊಫೆಸರ್ ಮಾಲವಿಕಾ ಸರ್ಕಾರ್ "ಅವರೊಬ್ಬ ಅತ್ಯುನ್ನತ ಶಿಕ್ಷಕರಾಗಿದ್ದರು ಹಾಗೂ ಅಶೋಕ ವಿವಿಯ ಪ್ರಗತಿಗೆ ಮಾರ್ಗದರ್ಶಕರಾಗಿದ್ದರು, ಅವರ ಅನುಪಸ್ಥಿತಿ ನಮ್ಮನ್ನು ಕಾಡಲಿದೆ,'' ಎಂದಿದ್ದಾರೆ.