×
Ad

ಉಡುಪಿ: ಎರಡು ದಿನಗಳ ಎಂಜಿಎಂ ಕೃಷಿ ಸಮ್ಮಿಲನ

Update: 2021-03-17 19:41 IST

ಉಡುಪಿ, ಮಾ.17: ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಸ್ಥಳೀಯ ಕೃಷಿ ಹಾಗೂ ಕೃಷಿ ಬದುಕಿನ ಬಗ್ಗೆ ಅರಿವು ಮೂಡಿಸಲು ಹಾಗೂ ಅವರಲ್ಲಿ ಕೃಷಿ ಆಸಕ್ತಿ ಹೆಚ್ಚಿಸುವ ಸಲುವಾಗಿ ಎರಡು ದಿನಗಳ ಎಂಜಿಎಂ ಕೃಷಿ ಸಮ್ಮಿಲನ ಕಾರ್ಯಕ್ರಮವನ್ನು ಮಾ.20 ಮತ್ತು 21ರಂದು ಎಂಜಿಎಂ ಕಾಲೇಜಿನ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ ನಾಯ್ಕಾ ತಿಳಿಸಿದ್ದಾರೆ.

ಕಾಲೇಜಿನಲ್ಲಿ ಬುಧವಾರ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಎಂ.ಜಿ.ಎಂ. ಕಾಲೇಜಿನ ಮಾನವಿಕ ಹಾಗೂ ಭಾಷಾ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಮತ್ತು ಐಕ್ಯುಎಸಿ ಸಂಯುಕ್ತವಾಗಿ ಈ ಕೃಷಿ ಮೇಳವನ್ನು ಹಮ್ಮಿ ಕೊಳ್ಳಲಿವೆ ಎಂದು ಅವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲೆಯ ಕೃಷಿಕರಿಂದ ಕೃಷಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ವಿವಿಧ ವಿಷಯಗಳ ಕುರಿತು ತಜ್ಞರಿಂದ, ಸಾಧಕ ಕೃಷಿಕರಿಂದ ಮಾಹಿತಿ ಮಾಲಿಕೆ ಏರ್ಪಡಿಸಲಾಗಿದೆ. ಬೆಳೆಯುವವರಿಂದಲೇ ಗ್ರಾಹಕರು ನೇರವಾಗಿ ಹಣ್ಣು, ತರಕಾರಿ, ಸಸಿ, ಬೀಜ ಹಾಗೂ ಮಣ್ಣಿನ ಮಡಿಕೆ, ಬುಟ್ಟಿ ಮತ್ತಿತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಅವಕಾಶವಿದೆ. ಕೈತೋಟ, ತಾರಸಿ ಕೃಷಿ, ಕಸಿ ಕಟ್ಟುವಿಕೆ ಮತ್ತು ಅಂಗಾಂಶ ಕೃಷಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದ, ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ಕಾಡುತ್ಪತ್ತಿಗಳ ಪರಿಚಯ ಹಾಗೂ ಮೌಲ್ಯವರ್ಧನೆಯ ಕುರಿತು ವಿವಿಧ ಪ್ರಯೋಗಗಳಿಗೆ ಚಾಲನೆ ದೊರೆಯಲಿದೆ ಎಂದೂ ಡಾ.ನಾಯ್ಕಿ ವಿವರಿಸಿದರು.

ಕೃಷಿ ಸಮ್ಮಿಲನವನ್ನು ಮಾ.20ರ ಬೆಳಗ್ಗೆ 10 ಗಂಟೆಗೆ ಉಡುಪಿ ಜಿಪಂ ಸಿಇಓ ಡಾ. ನವೀನ್ ಭಟ್ ವೈ ಉದ್ಘಾಟಿಸಲಿದ್ದಾರೆ. ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ, ಪ್ರಗತಿ ಪರ ಕೃಷಿಕ ನಟರಾಜ್ ಹೆಗ್ಡೆ, ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್, ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಎ.ಮಾಲತಿ ದೇವಿ, ಐಕ್ಯುಎಸಿ ಸಂಯೋಜಕ ಅರುಣ್‌ ಕುಮಾರ್ ಬಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಬಳಿಕ ಎರಡು ದಿನಗಳ ಕಾಲ ನಡೆಯುವ ಮಾತಿನ ಮಾಲಿಕೆಯಲ್ಲಿ ಮಂಗಳೂರಿನ ಪಶುವೈದ್ಯ ಡಾ. ಮನೋಹರ ಉಪಾಧ್ಯ ಅಂಗಳದಾಚೆಯೂ ಆರೋಗ್ಯ, ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್, ಸಮಗ್ರ ಕೃಷಿ ಪದ್ದತಿಯಿಂದ ಅಧಿಕ ಆದಾಯ, ಶಂಕರಪುರದ ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೊ ತಾರಸಿ ಕೃಷಿಯಲ್ಲಿ ವಿನೂತನ ಪ್ರಯೋಗ, ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ, ಸಾಮುದಾಯಿಕ ಸಹಭಾಗಿತ್ವದ ಕುರಿತು ಮಾತನಾಡಲಿದ್ದಾರೆ.

ಮಾ.21ರಂದು ಆಯುರ್ವೇದ ವೈದ್ಯ ಡಾ.ಶ್ರೀಧರ ಬಾಯರಿ ಔಷಧಿ ಸಸ್ಯಗಳಿಂದ ಆರೋಗ್ಯ ರಕ್ಷಣೆ, ಅಜೆಕಾರಿನ ಪ್ರಗತಿಪರ ಕೃಷಿಕ ನಾರಾಯಣ ನಾಯ್ಕ ನಿಂಬೆ ಕೃಷಿ, ಸವಾಲು ಮತ್ತು ಸಾಧನೆ, ಕಲಾವಿದ ಮತ್ತು ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ಸಾಂಪ್ರದಾಯಿಕ ಕೃಷಿ ಪದ್ದತಿಯ ದಾಖಲೀಕರಣ, ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಅಂಗಾಂಶ ಕೃಷಿಯ ಅವಶ್ಯಕತೆ ಮತ್ತು ನಿರ್ವಹಣೆಯ ಕುರಿತು ಮಾತನಾಡಲಿದ್ದಾರೆ.

ಸಮ್ಮಿಲನದಲ್ಲಿ ವಿವಿಧ ತರಕಾರಿ ಬೀಜಗಳ ಮಾರಾಟ, ತಾರಸಿ ಕೃಷಿಯ ಕುರಿತು ಪ್ರಾತ್ಯಕ್ಷಿಕೆ, ಕರಾವಳಿಯ ಸಾಂಪ್ರದಾಯಿಕ ಮತ್ತು ಗ್ರಾಮೀಣ ಆಹಾರ ಮಳಿಗೆ, ಕಾಟು ಮಾವು, ತಾಳಿಬೊಂಡ, ಪುನರ್ಪುಳಿ ಮೊದಲಾದ ಸ್ಥಳೀಯ ಹಣ್ಣಿನ ಐಸ್‌ಕ್ಯಾಂಡಿ ಮಾರಾಟ ನಡೆಯಲಿದೆ ಎಂದು ಸಮ್ಮಿಲನದ ಸಂಚಾಲಕರಾದ ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕ ಮಂಜುನಾಥ ಕಾಮತ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಲಕ್ಷ್ಮೀನಾರಾಯಣ ಕಾರಂತ, ಐಕ್ಯುಎಸಿ ಸಂಯೋಜಕ ಅರುಣ್ ‌ಕುಮಾರ್ ಬಿ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News