×
Ad

ರಮಝಾನ್ : ಮಸೀದಿಗೆ ತೆರಳುವವರಿಗೆ ಭದ್ರತೆ ನೀಡಲು ಮುಸ್ಲಿಂ ಲೀಗ್ ಮನವಿ

Update: 2021-03-17 19:45 IST

ಮಂಗಳೂರು, ಮಾ.17: ಮುಸ್ಲಿಮರ ಪವಿತ್ರ ರಮಝಾನ್ ಉಪವಾಸ ಎಪ್ರಿಲ್ 13ರಿಂದ ಆರಂಭಗೊಳ್ಳುತ್ತಿದ್ದು, ಮೇ 12ಕ್ಕೆ ಕೊನೆಗೊಳ್ಳಲಿದೆ. ಈ ತಿಂಗಳಲ್ಲಿ ರಾತ್ರಿ ಹೊತ್ತು ಮಸೀದಿಗೆ ತೆರಳುವವರಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿ ಇಂಡಿಯನ್ ಯುನಿಯನ್ ಮುಸ್ಲಿಂ ಲೀಗ್ ನಿಯೋಗವು ದ.ಕ. ಜಿಲ್ಲಾಧಿಕಾರಿ, ಮಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಿತು.

ರಮಝಾನ್ ತಿಂಗಳ 20ರಿಂದ 30ರವರೆಗೆ ಬೆಳಗ್ಗಿನ ಜಾವ 3 ಗಂಟೆಗೆ ವಿಶೇಷ ನಮಾಝ್ ‌ಗಾಗಿ ಮಸೀದಿಗೆ ತೆರಳುವವರಿಗೆ ಸೂಕ್ತ ಅವಕಾಶ ನೀಡಬೇಕು. ಈ ಸಂದರ್ಭ ನಿರಂತರ ತಡೆರಹಿತ ವಿದ್ಯುತ್, ಕುಡಿಯುವ ನೀರು, ಅಡುಗೆ ಅನಿಲ ಪೂರೈಸುವುದು, ದಾರಿದೀಪ ದುರಸ್ತಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.

ಪಡಿತರ ಆಹಾರ ಸಾಮಗ್ರಿಗಳನ್ನು ಹೆಚ್ಚುವರಿಯಾಗಿ ಪೂರೈಸಲು ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಅಕ್ಕಿಯೊಂದಿಗೆ ಬೆಳ್ತಿಗೆ ಅಕ್ಕಿ, ಸಕ್ಕರೆ, ಅಡುಗೆ ಎಣ್ಣೆ, ತೊಗರಿಬೇಳೆ, ಹೆಸರುಬೇಳೆ ಮುಂತಾದವುಗಳನ್ನು ನೀಡಬೇಕು. ಈ ನಿಯಮಗಳನ್ನು ಎಲ್ಲ ಧರ್ಮದ ಧಾರ್ಮಿಕ ಹಬ್ಬಗಳಿಗೆ ಅನ್ಯಯಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.

ನಿಯೋಗದಲ್ಲಿ ದ.ಕ. ಜಿಲ್ಲಾ ಮುಸ್ಲಿಂ ಲೀಗ್‌ನ ಅಧ್ಯಕ್ಷ ಸುಲೈಮಾನ್ ಎಸ್., ಕನ್ವೀನರ್ ಎ.ಎಸ್.ಇ. ಕರೀಂ ಕಡಬ, ಸದಸ್ಯರಾದ ರಿಯಾಜ್ ಹರೇಕಳ, ಮುಖಂಡರಾದ ಬಶೀರ್ ಉಳ್ಳಾಲ, ಮುಹಮ್ಮದ್ ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News