×
Ad

ಹೋರಾಟಗಾರ ಶಿವಕುಮಾರ್‌ಗೆ ಕಸ್ಟಡಿಯಲ್ಲಿ ಹಿಂಸೆ ಆರೋಪದ ವಿಚಾರಣೆಗೆ ಹೈಕೋರ್ಟ್ ಆದೇಶ

Update: 2021-03-17 19:59 IST

ಹೊಸದಿಲ್ಲಿ,ಮಾ.17: ಹರ್ಯಾಣ ಪೊಲೀಸರು ಕಾರ್ಮಿಕ ಹಕ್ಕುಗಳ ಕಾರ್ಯಕರ್ತ ಶಿವಕುಮಾರ ಅವರನ್ನು ಅಕ್ರಮವಾಗಿ ಬಂಧಿಸಿದ್ದರು ಮತ್ತು ಕಸ್ಟಡಿಯಲ್ಲಿ ಹಿಂಸೆ ನೀಡಿದ್ದರು ಎಂಬ ಆರೋಪಗಳ ಬಗ್ಗೆ ವಿಚಾರಣೆ ನಡೆಸುವಂತೆ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಫರೀದಾಬಾದ್‌ನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಿಗೆ ಆದೇಶಿಸಿದೆ.

ಶಿವಕುಮಾರ್ ಮತ್ತು ಇನ್ನೋರ್ವ ಕಾರ್ಮಿಕ ಹಕ್ಕುಗಳ ಕಾರ್ಯಕರ್ತೆ ನವದೀಪ ಕೌರ್ ಅವರನ್ನು ಪೊಲೀಸರು ಜನವರಿಯಲ್ಲಿ ಹಫ್ತಾ ವಸೂಲಿ ಮತ್ತು ಕಳ್ಳತನದ ಆರೋಪಗಳಲ್ಲಿ ಬಂಧಿಸಿದ್ದರು. ಅವರ ವಿರುದ್ಧ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಲಾಗಿತ್ತು.

ಕುಮಾರ್ ಮತ್ತು ಕೌರ್ ಕೇವಲ ದಿಲ್ಲಿಯ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಜನಬೆಂಬಲವನ್ನು ಕ್ರೋಡೀಕರಿಸುತ್ತಿದ್ದರು ಎಂದು ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.

ಪೊಲೀಸ್ ದೌರ್ಜನ್ಯದ ವಿರುದ್ಧ ಕುಮಾರ್ ತಂದೆ ರಾಜಬೀರ್ ಅವರು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು,ಮೂರು ಮೆಡಿಕೋ-ಲೀಗಲ್ ವರದಿಗಳು ಮತ್ತು ಸ್ಥಿತಿಗತಿ ವರದಿಯನ್ನು ಲಗತ್ತಿಸಿದ್ದರು.

ಈ ಮೊದಲು ಉಚ್ಚ ನ್ಯಾಯಾಲಯದ ನಿರ್ದೇಶದ ಮೇರೆಗೆ ಕುಮಾರ್ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದ್ದ ಚಂಡಿಗಡದ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯು ಅವರಿಗೆ ಚಿತ್ರಹಿಂಸೆ ನೀಡಲಾಗಿತ್ತು ಎನ್ನುವುದನ್ನು ಸಮರ್ಥಿಸಿತ್ತು.

ಕುಮಾರ ತನ್ನ ವಿರುದ್ಧದ ಎಲ್ಲ ಮೂರೂ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡ ಬಳಿಕ ಮಾ.4ರಂದು ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ಕೌರ್ ಅವರನ್ನೂ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News