ಜನರಿಗೆ ತೊಂದರೆಯಾಗದಂತೆ ಕಾಮಗಾರಿ ನಡೆಯಲಿ: ದ.ಕ. ಜಿಲ್ಲಾಧಿಕಾರಿ
ಮಂಗಳೂರು, ಮಾ.17: ಮಂಗಳೂರು ನಗರದಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಜನಸಾಮಾನ್ಯರಿಗೆ ತೊಂದರೆ ಉಂಟಾಗದಂತೆ ಎಚ್ಚರವಹಿಸಿ, ವಿಳಂಬವಿಲ್ಲದೇ ನಿರ್ವಹಿಸಬೇಕೆಂದು ಅಧಿಕಾರಿ ಗಳಿಗೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕುರಿತು ಮಂಗಳವಾರ ಸಂಜೆ ನಡೆದ ಸ್ಮಾರ್ಟ್ ಸಿಟಿ ಯೋಜನೆ ಕಾಮಗಾರಿಗಳ ಪುನರ್ ಆರಂಭ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನ್ಯಾಯಾಲಯದ ಆದೇಶದ ಅನ್ವಯ ಸ್ಥಗಿತಗೊಳಿಸಲಾಗಿದ್ದ ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಮತ್ತೆ ಮುಂದುವರಿ ಸಲು ಕೋರ್ಟ್ ಅನುಮತಿ ನೀಡಿದೆ. ಕಾಮಗಾರಿಗಳನ್ನು ಪುನರ್ ಆರಂಭಿಸಲು ಅಭಿಯಂತರರು ಯೋಜನೆ ರೂಪಿಸಿ, ಕಾಮಗಾರಿಗೆ ಸಾಮಗ್ರಿ ಸಂಗ್ರಹಿಸುವುದರೊಂದಿಗೆ ನಿಗದಿತ ಕಾಲಾವಧಿಯೊಳಗೆ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗ ಬೇಕು ಎಂದು ಸೂಚನೆ ನೀಡಿದರು.
ಈಗಾಗಲೇ ಯೋಜನೆಯಡಿ 31 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಅವುಗಳಲ್ಲಿ ಶೇ.90ರಷ್ಟು ಪೂರ್ಣಗೊಂಡಿರುವ ಕಾಮಗಾರಿ ಗಳನ್ನು ತಕ್ಷಣದಲ್ಲಿ ಪೂರ್ಣಗೊಳಿಸಬೇಕು. ಬಾಕಿ ಉಳಿದ ಕಾಮಗಾರಿಗಳನ್ನು ಮುಂಬರುವ ಮುಂಗಾರು ಮಳೆಯ ಆರಂಭದ ಮುನ್ನವೇ ಪೂರ್ಣಗೊಳಿಸಬೇಕು. ಸಾರ್ವಜನಿಕ ರಸ್ತೆಗಳ ಸಂಚಾರ ನಿಲುಗಡೆ ಮಾಡಿ ಕೈಗೊಂಡಿರುವ ಕಾಮಗಾರಿ ಗಳನ್ನು ರಾತ್ರಿ, ಹಗಲು ಪಾಳಿಯಲ್ಲಿ ಕಾರ್ಯ ನಿರ್ವಹಿಸಲು ಬೇರೆ ಬೇರೆ ಕಾರ್ಮಿಕರನ್ನು ನಿಯೋಜಿಸುವುದರೊಂದಿಗೆ ಕೆಲಸ ನಿರ್ವಹಿಸಬೇಕು. ಆಗ ಮಾತ್ರ ಶೀಘ್ರವಾಗಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯ ಕಾಮಗಾರಿಗಳನ್ನು ಕೈಗೊಂಡಿರುವುದರಿಂದ ಜನಸಾಮಾನ್ಯರಿಗೆ ಅನಾನುಕೂಲ ಉಂಟಾಗಿದೆ. ಆದರೆ, ಅಭಿವೃದ್ಧಿ ಕಾರ್ಯಗಳು ಪೂರ್ಣಗೊಂಡಾಗ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಇನ್ನೂ ಹೆಚ್ಚಿನ ಅನುಕೂಲ ವಾಗಲಿದ್ದು, ಜನಸಾಮಾನ್ಯರು ಸಹಕರಿಸಬೇಕೆಂದು ತಿಳಿಸಿದರು.
ಕಾಮಗಾರಿಗಳನ್ನು ಕೈಗೊಳ್ಳುವ ಸ್ಥಳದಲ್ಲಿ ಎಲ್ಲೆಂದರಲ್ಲಿ ಪೈಪ್‌ಗಳು ಹಾಗೂ ಮತ್ತಿತರ ವಸ್ತುಗಳನ್ನು ಹಾಕುವುದರಿಂದ ಜನರ ಓಡಾಟಕ್ಕೆ ತೊಂದರೆ ಉಂಟಾಗುತ್ತದೆ. ಈ ಬಗ್ಗೆ ಎಚ್ಚರ ವಹಿಸಿ, ದಾಸ್ತಾನು ಮಾಡಬೇಕು. ಕಾಮಗಾರಿಗಳು ಮುಗಿದ ನಂತರ ಅಲ್ಲಿನ ಸ್ಥಳಗಳು ಯಥಾಸ್ಥಿತಿಯಲ್ಲಿರುವಂತೆ, ಹೊಂಡ, ತಗ್ಗು ನಿರ್ಮಾಣವಾಗದಂತೆ ನೋಡಿಕೊಳ್ಳಬೇಕು ಎಂದರು.
ರಸ್ತೆ ಕಾಮಗಾರಿ ಕೈಗೊಳ್ಳಲು ಸಂಚಾರಕ್ಕೆ ಬದಲಿ ವ್ಯವಸ್ಥೆ ಕಲ್ಪಿಸಲು ಪೊಲೀಸ್ ಇಲಾಖೆ ಮುಂದಾಗಬೇಕು. ವಿನಾಕಾರಣ ಗುತ್ತಿಗೆದಾರರು ಕಾಮಗಾರಿಗಳನ್ನು ಒಂದು, ಎರಡು ದಿನ ನಿಲ್ಲಿಸುವುದು ಕಂಡು ಬಂದಾಗ ಕೂಡಲೇ ಜಿಲ್ಲಾಡಳಿತಕ್ಕೆ ವರದಿಯನ್ನು ಸಹ ನೀಡಬೇಕೆಂದು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಾನಗರ ಪಾಲಿಕೆಯ ಮಹಾಪೌರ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯನ್ನು ಅನುಷ್ಠಾನಗೊಳಿಸಲು ಮಹಾನಗರ ಪಾಲಿಕೆಯ ಕಿರಿಯ ಅಭಿಯಂತರರ ನೆರವನ್ನು ಪಡೆದುಕೊಳ್ಳಬಹುದಾಗಿದೆ. ಈ ಯೋಜನೆಯ ಕಾಮಗಾರಿಗಳು ಮಾನ್ಸೂನ್ ಮಳೆಯ ಪ್ರಾರಂಭಕ್ಕೂ ಮುನ್ನ ಪೂರ್ಣಗೊಳಿಸದಿದ್ದಲ್ಲಿ ಮಳೆಯ ನೀರು ಎಲ್ಲೆಂದರಲ್ಲಿ ನುಗ್ಗಿ ಮನೆಗಳಿಗೆ ಹಾಗೂ ವ್ಯಾಪಾರಸ್ಥರಿಗೆ ನಷ್ಟ ಉಂಟಾಗುವ ಸಾಧ್ಯತೆ ಇದೆ. ಈ ಬಗ್ಗೆ ಕಾಳಜಿ ವಹಿಸಿ ಕಾಮಗಾರಿಗಳನ್ನು ಶೀಘ್ರದಲ್ಲಿಯೇ ಪೂರ್ಣ ಗೊಳಿಸಬೇಕು ಎಂದರು.
ಮಂಗಳೂರು ನಗರ ವ್ಯಾಪ್ತಿಯಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಪ್ರೊಬೇಶನರಿ ಐಎಎಸ್ ಅಧಿಕಾರಿ ಮೋನಾ ರೋತ್ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ದಿನೇಶ್, ಸ್ಮಾರ್ಟ್ ಸಿಟಿ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಮಿಶ್ರಾ ಹಾಗೂ ವಿವಿಧ ಇಲಾಖೆಯ ಅನುಷ್ಟಾನಾಧಿಕಾರಿಗಳು, ಅಭಿಯಂತರರು ಉಪಸ್ಥಿತರಿದ್ದರು.