ನಾಯಿ ಸತ್ತರೂ ಶೋಕ ಆಚರಿಸುತ್ತಾರೆ, ಆದರೆ ರೈತರ ಸಾವಿಗೆ ಸಂತಾಪವೂ ಇಲ್ಲ: ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್
ಹೊಸದಿಲ್ಲಿ: ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಇಂದು ಬೆಂಬಲ ವ್ಯಕ್ತಪಡಿಸಿರುವ ಮೇಘಾಲಯದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಕಟುವಾದ ಹೇಳಿಕೆಗಳ ಮೂಲಕ ಆಡಳಿತಾರೂಢ ಬಿಜೆಪಿಯನ್ನು ತೀವ್ರವಾಗಿ ಟೀಕಿಸಿದರು. ದಿಲ್ಲಿ ಗಡಿಭಾಗಗಳಲ್ಲಿ 4 ತಿಂಗಳುಗಳಿಂದ ನಡೆಯುತ್ತಿರುವ ರೈತರ ಪ್ರತಿಭಟನೆಯಿಂದಾಗಿ ಉತ್ತರಪ್ರದೇಶ, ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ಬಿಜೆಪಿ ಬೆಂಬಲ ಕಳೆದುಕೊಳ್ಳಲಿದೆ ಎಂದು ಎಚ್ಚರಿಸಿದರು.
ಒಂದು ನಾಯಿ ಸತ್ತರೂ ಅದಕ್ಕೆ ಶೋಕಾಚರಣೆ ನಡೆಯುತ್ತದೆ. ಆದರೆ, 250 ರೈತರು ಮೃತಪಟ್ಟಿದ್ದಾರೆ. ಇದಕ್ಕೆ ಈ ತನಕ ಯಾರೂ ಸಂತಾಪ ವ್ಯಕ್ತಪಡಿಸಿಲ್ಲ. ಈ ರೈತ ಚಳವಳಿ ಇದೇ ರೀತಿ ದೀರ್ಘ ಸಮಯ ಮುಂದುವರಿದರೆ ಪಶ್ಚಿಮ ಉತ್ತರಪ್ರದೇಶ, ರಾಜಸ್ಥಾನ ಹಾಗೂ ಹರ್ಯಾಣದಲ್ಲಿ ಬಿಜೆಪಿ ಸೋಲನುಭವಿಸಲಿದೆ ಎಂದು NDTVಗೆ ನೀಡಿದ ಸಂದರ್ಶನವೊಂದರಲ್ಲಿ ಮಲಿಕ್ ತಿಳಿಸಿದರು.
ರೈತರ ಪ್ರತಿಭಟನೆಯ ಕುರಿತಾಗಿ ತಾನು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತನಾಡಿರುವೆ. ರೈತರುಗಳನ್ನು ಬರಿಗೈಯಲ್ಲಿ ವಾಪಸ್ ಕಳುಹಿಸಬಾರದು. ಸರಕಾರವು ಅವರೊಂದಿಗೆ ಶೀಘ್ರವೇ ಮುಕ್ತವಾಗಿ ಮಾತನಾಡಬೇಕು ಎಂದು ಆಗ್ರಹಿಸಿದರು.
ರಾಜ್ಯಪಾಲರಾಗಿ ನಿಮ್ಮ ವಿವಾದಾತ್ಮಕ ಹೇಳಿಕೆಗಳ ಕುರಿತು ನಿಮಗೆ ಕಳವಳವಿದೆಯೇ ಎಂದು ಕೇಳಿದಾಗ, ನಾನು ಹಾನಿ ಮಾಡುತ್ತಿದ್ದೇನೆ ಎಂದು ಸರಕಾರ ಯೋಚಿಸಿದರೆ ನಾನು ಬದಿಗೆ ಸರಿಯುವೆ. ನಾನು ರಾಜ್ಯಪಾಲನಲ್ಲದಿದ್ದರೂ ರೈತರ ಪರ ಮಾತನಾಡುತ್ತೇನೆ ಎಂದರು.