ಗ್ರಾಪಂ ಕಚೇರಿ ಮುಖ್ಯದ್ವಾರ ಬದಲಾವಣೆ ಪ್ರಶ್ನಿಸಿದಕ್ಕೆ ಅಧ್ಯಕ್ಷರಿಂದ ಜಾತಿನಿಂದನೆಯ ದೂರು : ಆರೋಪ
ಉಡುಪಿ, ಮಾ.17: ತೆಂಕನಿಡಿಯೂರು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಕಚೇರಿಯ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿರುವುದನ್ನು ಪ್ರಶ್ನಿಸಿದ ಗ್ರಾಪಂ ಸದಸ್ಯರು ಮತ್ತು ಗ್ರಾಮಸ್ಥರ ಮೇಲೆ ಗ್ರಾಪಂ ಅಧ್ಯಕ್ಷರು ಜಾತಿ ನಿಂದನೆ ಆರೋಪಿಸಿ ದೂರು ದಾಖಲಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಪ್ರಖ್ಯಾತ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧ್ಯಕ್ಷರ ಈ ಕ್ರಮ ಖಂಡನೀಯ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆ ಯಾದ ಸದಸ್ಯರು ಪಂಚಾಯತ್‌ನಲ್ಲಿ ನಡೆದ ತಪ್ಪನ್ನು ಪ್ರಶ್ನಿಸಿದಕ್ಕೆ ಸೂಕ್ತ ಉತ್ತರ ನೀಡದೆ ಉಡಾಫೆಯ ವರ್ತನೆಯನ್ನು ಬಿಜೆಪಿ ಬೆಂಬಲಿತ ಅಧ್ಯಕ್ಷರು ನಡೆಸಿ ಕೊಂಡು ಬರುತ್ತಿದ್ದಾರೆ ಎಂದು ದೂರಿದರು.
ರಸ್ತೆಯ ಬದಿ ಹಾಗೂ ಜನರಿಗೆ ಸುಗಮವಾಗಿ ಪ್ರವೇಶಿಸಲು ಇದ್ದ ಮುಖ್ಯ ದ್ವಾರವನ್ನು ತೆಗೆದು, ಮೂಲೆಯಲ್ಲಿ ಜನರಿಗೆ ನಡೆದಾಡಲು ಕೂಡ ಸಾಧ್ಯವಾಗದ ರೀತಿಯಲ್ಲಿ ಮುಖ್ಯದ್ವಾರವನ್ನು ನಿರ್ಮಿಸುವ ಮೂಲಕ ಜನರಿಗೆ ತೊಂದರೆ ಮಾಡಲಾಗುತ್ತಿದೆ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕುಳಿತುಕೊಳ್ಳುವ ಕುರ್ಚಿ ವಾಸ್ತು ಪ್ರಕಾರವಾಗಿ ಇಲ್ಲದೆ ಇದ್ದ ಕಾರಣಕ್ಕೆ ಈ ಬದಲಾವಣೆ ಮಾಡ ಲಾಗಿದೆ ಎಂಬ ಗುಮಾನಿ ಇದೆ ಎಂದು ಅವರು ತಿಳಿಸಿದರು.
ಮುಖ್ಯದ್ವಾರ ಬದಲಾಯಿಸಿರುವ ಬಗ್ಗೆ ಮನವಿ ನೀಡಲು ಬಂದ ನಾಲ್ಕು ಮಂದಿ ಸದಸ್ಯರ ವಿರುದ್ಧ ಗ್ರಾಪಂ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸಿರುವ ಹಿಂದೆ ಕೆಲವೊಂದು ಕಾಣದ ಕೈಗಳ ಕೈವಾಡ ಇದೆ. ಶಾಂತಿಯುತ ವಾಗಿದ್ದ ತೆಂಕನಿಡಿಯೂರು ಗ್ರಾಪಂನ್ನು ಅಶಾಂತಿಯ ಗೂಡಾಗಿ ಪರಿವರ್ತಿಸಲು ಬಿಜೆಪಿ ಬೆಂಬಲಿತ ಆಡಳಿತ ಹೊರಟಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಯತೀಶ್ ಕರ್ಕೇರ, ಸದಸ್ಯರಾದ ಶರತ್ ಶೆಟಿ್ಟ, ಅನುಷಾ ಆಚಾರ್ಯ ಉಪಸ್ಥಿತರಿದ್ದರು.