×
Ad

ಕೊರೋನ ಹೆಚ್ಚಳ: ಎಂಐಟಿ ಪರೀಕ್ಷೆ ಮುಂದೂಡಿಕೆ

Update: 2021-03-17 21:24 IST

ಉಡುಪಿ, ಮಾ.17: ಕಳೆದ ಕೆಲವು ದಿನಗಳಿಂದ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಹಾಗೂ ಮಾಹೆ ಪರಿಸರದಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಬರುತ್ತಿರುವವರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾದ ಹಿನ್ನೆಲೆಯಲ್ಲಿ ಎಂಐಟಿ ಕ್ಯಾಂಪಸ್ ಪರಿಸರವನ್ನು ಕಂಟೈನ್‌ಮೆಂಟ್ ಝೋನ್ ಎಂದು ಜಿಲ್ಲಾಧಿಕಾರಿ ಘೋಷಿಸಿದ್ದಾರೆ.

ಎಂಐಟಿಯಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ನಡೆಯುತಿದ್ದು, ವಿದ್ಯಾರ್ಥಿಗಳೆಲ್ಲರೂ ಪರೀಕ್ಷೆ ಬರೆಯಲೆಂದು ಬಂದಿದ್ದು, ಹೆಚ್ಚಿನವರು ಹಾಸ್ಟೆಲ್‌ಗಳಲ್ಲಿ, ಇನ್ನುಳಿದವರು ಮಣಿಪಾಲ ಪರಿಸರದಲ್ಲಿ ಪ್ರತ್ಯೇಕ ವಸತಿ ವ್ಯವಸ್ಥೆಯೊಂದಿಗಿದ್ದಾರೆ.
ಕಳೆದ ಐದಾರು ದಿನಗಳಿಂದ ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಬಂದಿರುವವರಲ್ಲಿ ಶೇ.75ಕ್ಕೂ ಅಧಿಕ ಮಂದಿ ಮಣಿಪಾಲದವರಾಗಿದ್ದಾರೆ. ನಿನ್ನೆ ಪಾಸಿಟಿವ್ ಬಂದ 32 ಮಂದಿಯಲ್ಲಿ 27 ಮಂದಿ ಹಾಗೂ ಇಂದು ಪಾಸಿಟಿವ್ ಬಂದ 42ರಲ್ಲಿ 26 ಮಂದಿ ಎಂಐಟಿಯ ವಿದ್ಯಾರ್ಥಿಗಳೇ ಇದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ ಚಂದ್ರ ಸೂಡ ತಿಳಿಸಿದ್ದಾರೆ.

ಈ ವಿದ್ಯಾರ್ಥಿಗಳಿಗೆ ಶುಕ್ರವಾರ ಕೊನೆಯ ಪರೀಕ್ಷೆಯೊಂದು ಉಳಿದಿದೆ. ಆದರೆ ಇವರು ಆ ಪರೀಕ್ಷೆಯಲ್ಲಿ ಭಾಗವಹಿಸಬೇಕಿದ್ದರೆ, ಕೋವಿಡ್ ಮಾರ್ಗಸೂಚಿಯಂತೆ ಅವರಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಬೇಕಿದೆ. ಅವರಲ್ಲಿ ರೋಗದ ಲಕ್ಷಣಗಳಿಲ್ಲದೇ ಇರುವುದರಿಂದ ಹೋಮ್ ಐಸೋಲೇಷನ್‌ನಲ್ಲಿದ್ದರೂ ಹೊರಗೆಲ್ಲೂ ತಿರುಗದಂತೆ ಕಟ್ಟುನಿಟ್ಟಿನ ನಿಗಾ ವಹಿಸಬೇಕೆಂದು ಎಂಐಟಿ ಆಡಳಿತಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಒಂದು ವೇಳೆ ಶುಕ್ರವಾರದ ಪರೀಕ್ಷೆಯನ್ನು ಕೋವಿಡ್ ಮಾರ್ಗಸೂಚಿಯಂತೆ ನಡೆಸಲು ಸಾಧ್ಯವಿಲ್ಲದಿದ್ದರೆ ಅದನ್ನು ಮುಂದೂಡುವಂತೆಯೂ ತಿಳಿಸಲಾಗಿದೆ ಎಂದಿರುವ ಅವರು, ಪಾಸಿಟಿವ್ ಬಂದ ಮಣಿಪಾಲದ ವಿದ್ಯಾರ್ಥಿಗಳಾರೂ ಆಸ್ಪತ್ರೆಗೆ ದಾಖಲಾಗಿಲ್ಲ. ಎಲ್ಲರೂ ಅವರವರ ವಾಸ ಸ್ಥಳದಲ್ಲೇ ಹೋಮ್ ಐಸೋಲೇಷನ್‌ನಲ್ಲಿದ್ದಾರೆ ಎಂದರು.

ಪರೀಕ್ಷೆ ಮುಂದೂಡಿಕೆ: ಕೋವಿಡ್‌ಗೆ ಸಂಬಂಧಿಸಿದಂತೆ ಇಂದು ರಾತ್ರಿ ಪತ್ರಿಕಾ ಹೇಳಿಕೆ ಯೊಂದನ್ನು ಬಿಡುಗಡೆಗೊಳಿಸಿರುವ ಎಂಐಟಿಯ ನಿರ್ದೇಶಕರು, ಮೊದಲ ಸೆಮಿಸ್ಟರ್ ಬಿ.ಟೆಕ್‌ನ ವಿದ್ಯಾರ್ಥಿಗಳಿಗೆ ಬಾಕಿ ಉಳಿದಿರುವ ಪರೀಕ್ಷೆಯನ್ನು ಮುಂದೂಡಿದ್ದು, ಅದನ್ನು ಮುಂದಿನ ದಿನಗಳಲ್ಲಿ ನಡೆಸುವುದಾಗಿ ತಿಳಿಸಿದ್ದಾರೆ.

ಅಲ್ಲದೇ ವಿದ್ಯಾರ್ಥಿಗಳಿಗೆ ಎಲ್ಲಾ ಥಿಯರಿ ಕ್ಲಾಸ್‌ಗಳನ್ನು ಆನ್‌ಲೈನ್‌ನಲ್ಲೇ ನಡೆಸಲಾ ಗುವುದು. ಪ್ರಯೋಗಾಲಯ, ಪ್ರಾಕ್ಟಿಕಲ್ ತರಗತಿಗಳು, ಕಾಂಟಾಕ್ಟ್ ಕ್ಲಾಸ್‌ಗಳನ್ನು ಸಹ ರದ್ದುಗೊಳಿಸಿದ್ದು, ಮುಂದಿನ ದಿನಗಳಲ್ಲಿ ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News