×
Ad

ಸ್ವಚ್ಛತೆಯಲ್ಲಿ ಜಿಲ್ಲೆ ಅಗ್ರಸ್ಥಾನ ಕಾಯ್ದುಕೊಳ್ಳಲು ವಿದ್ಯಾರ್ಥಿಗಳ ಶ್ರಮ ಅಗತ್ಯ : ದಿನಕರ ಬಾಬು

Update: 2021-03-17 21:37 IST

ಉಡುಪಿ, ಮಾ.17: ಸ್ವಚ್ಛತೆಯಲ್ಲಿ ಉಡುಪಿ ಜಿಲ್ಲೆ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದು, ಮುಂದೆಯೂ ಕೂಡಾ ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ಅಗ್ರಸ್ಥಾನ ಉಳಿಸಿಕೊಳ್ಳುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಳ್ಳುವ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ತಿಳಿಸಿದ್ದಾರೆ.

ಬುಧವಾರ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ಸಭಾಂಗಣದಲ್ಲಿ ಬಾರತ ಸರಕಾರ ಮತ್ತು ನೆಹರು ಯುವ ಕೇಂದ್ರ ಉಡುಪಿ ಇವರ ವತಿಯಿಂದ ಗುರು ಯುವಕ ಮಂಡಲ ನೇಜಾರು, ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ -ಪೇತ್ರಿ, ಎನ್ನೆಸ್ಸೆಸ್ ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಸ್ವಚ್ಛ ಊರು - ಹಸಿರು ಊರು ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಮ್ಮ ದೇಶ ಸ್ವಚ್ಛ ಬಾರತ್ ಆಗಬೇಕೆಂಬ ನಿಟ್ಟಿನಲ್ಲಿ ಯುವ ಸಮುದಾಯಕ್ಕೆ ಇಂತಹ ಉತ್ತಮ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಕ್ಕೆ ಅಭಿನಂದನೆ ತಿಳಿಸಿದ ಅವರು, ನೀರಿನ ಮಹತ್ವದ ಬಗ್ಗೆಯೂ ಅರಿತು ನೀರನ್ನು ಮಿತವಾಗಿ ಬಳಸಿ ಮುಂದಿನ ಜನಾಂಗಕ್ಕೆ ನೀರನ್ನು ಉಳಿಸಬೇಕು ಈ ನಿಟ್ಟಿನಲ್ಲೂ ವಿದ್ಯಾರ್ಥಿಗಳು ಮುತುವರ್ಜಿ ವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಿಲಾಗ್ರಿಸ್ ಕಾಲೇಜಿನ ಸಂಚಾಲಕ ವಂ. ವಲೇರಿಯನ್ ಮೆಂಡೋನ್ಸ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ವಿನ್ಸೆಂಟ್ ಆಳ್ವ, ನೆಹರು ಯುವ ಕೇಂದ್ರದ ಅಧಿಕಾರಿ ವಿಲ್‌ಫ್ರೆಡ್ ಡಿ’ಸೋಜಾ, ಉಡುಪಿ ನಿರ್ಮಿತಿ ಕೇಂದ್ರದ ಅರುಣ್ ಕುಮಾರ್ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕಾ, ಸಮೃದ್ಧಿ ಮಹಿಳಾ ಮಂಡಳಿ ಚೇರ್ಕಾಡಿ ಪೇತ್ರಿಯ ಅಧ್ಯಕ್ಷೆ ಪ್ರಸನ್ನ ಪಿ. ಟ್, ಉಡುಪಿ ಅರಣ್ಯ ಇಲಾಖೆಯ ಕೇಶವ ಪೂಜಾರಿ ಎಂ. ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News