ಮಾರ್ಚ್ 26 ರಂದು ಭಾರತ್ ಬಂದ್ ಗೆ ಕರೆ ನೀಡಿದ ಸಂಯುಕ್ತ ಕಿಸಾನ್ ಮೋರ್ಚಾ
ಹೊಸದಿಲ್ಲಿ: ಮಾರ್ಚ್ 26ರಂದು ಭಾರತ್ ಬಂದ್ ನಡೆಸುವ ಮುಖಾಂತರ ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ದ ಹೋರಾಟವನ್ನು ತೀವ್ರಗೊಳಿಸಲು ನಿರ್ಧರಿಸಲಾಗಿದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ(ಎಸ್ ಕೆಎಂ)ತಿಳಿಸಿದೆ.
ರೈತರ ಚಳವಳಿಗೆ ನಾಲ್ಕು ತಿಂಗಳು ಪೂರ್ಣಗೊಂಡ ಸಂಕೇತವಾಗಿ ಮಾರ್ಚ್ 26ರಂದು ದೇಶವ್ಯಾಪಿ ಮುಷ್ಕರ ನಡೆಯಲಿದ್ದು, ಎಲ್ಲ ಅಂಗಡಿಗಳು ಹಾಗೂ ಇತರ ವ್ಯವಹಾರ ಸಂಸ್ಥೆಗಳು 12 ಗಂಟೆಗಳ ಕಾಲ ಮುಚ್ಚಲಿವೆ. ಮಾರ್ಚ್ 28ರಂದು ಹೋಳಿ ದಹನದ ವೇಳೆ ಕೃಷಿ ಕಾನೂನುಗಳ ಪ್ರತಿಗಳನ್ನು ಸುಡಲಾಗುವುದು ಎಂದು ಎಸ್ ಕೆ ಎಂ ತಿಳಿಸಿದೆ.
ಮುಷ್ಕರವು ಬೆಳಗ್ಗೆ 6ಕ್ಕೆ ಆರಂಭವಾಗಿ ಸಂಜೆ 6ರ ತನಕವೂ ಮುಂದುವರಿಯಲಿದೆ. ಈ ಅವಧಿಯಲ್ಲಿ ಎಲ್ಲ ಅಂಗಡಿಗಳು,ಡೈರಿಗಳು ಸಹಿತ ಎಲ್ಲವೂ ಬಾಗಿಲು ಮುಚ್ಚಲಿವೆ. ಹೋಳಿಯ ದಿನ 3 ಕೃಷಿ ಕಾಯ್ದೆಗಳ ಪ್ರತಿಯನ್ನು ಸುಟ್ಟು ಹಾಕಲಾಗುವುದು. ಸರಕಾರವು ಕೃಷಿ ಕಾಯ್ದೆಗಳನ್ನು ರದ್ದು ಮಾಡಿ, ಕನಿಷ್ಠ ಬೆಂಬಲ ಬೆಲೆಗೆ ಲಿಖಿತ ಖಾತರಿ ನೀಡುವ ವಿಶ್ವಾಸ ನಮಗಿದೆ ಎಂದು ಗಂಗಾನಗರ್ ಕಿಸಾನ್ ಸಮಿತಿಯ ರಂಜಿತ್ ರಾಜು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.