×
Ad

ಕನ್ನಡಿಗರ ಶಕ್ತಿ ಕೇಂದ್ರವಾಗಿ ಸಾಹಿತ್ಯ ಪರಿಷತ್: ಮಾಯಣ್ಣ

Update: 2021-03-17 22:36 IST

ಮಂಗಳೂರು, ಮಾ.17: ಕನ್ನಡ ಸಾಹಿತ್ಯ ಪರಿಷತ್‌ಗೆ ಹೊಸ ವಿಧಾನದಲ್ಲಿ ಕಾಯಕಲ್ಪ ನೀಡುವುದು ಮತ್ತು ಪರಿಷತ್ತನ್ನು ಸಮಸ್ತ ಕನ್ನಡಿಗರ ಶಕ್ತಿ ಕೇಂದ್ರವಾಗಿ ರೂಪಿಸುವ ನೆಲೆಯಲ್ಲಿ ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದೇನೆ. ಸಮಸ್ತ ಕನ್ನಡಿ ಗರು ತನ್ನನ್ನು ಬೆಂಬಲಿಸಿ ಗೆಲ್ಲಿಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಾಯಣ್ಣ ಹೇಳಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಕಸಾಪ ಕನ್ನಡಿಗರ ಶಕ್ತಿ ಕೇಂದ್ರವಾಗಬೇಕು ಎಂಬುದು ನನ್ನಾಸೆ. ಆರ್ಥಿಕ ಸಬಲೀಕರಣ, ಕ್ರಿಯಾತ್ಮಕ ಯೋಜನೆ, ಸ್ಪಷ್ಟ ಆಲೋಚನೆ, ದೂರದೃಷ್ಟಿ ಯೋಜನೆಗಳ ಮೂಲಕ ಕಸಾಪವನ್ನು ವೃದ್ಧಿಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ನಾಡಿನ ಚಿಂತಕರು, ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಹಲವು ಕ್ರಿಯಾಯೋಜನೆಗಳನ್ನು ರೂಪಿಸಿಕೊಂಡಿದ್ದೇನೆ ಎಂದು ಹೇಳಿದರು.

ಕಸಾಪ ಬಗ್ಗೆ ಪ್ರತಿಯೊಬ್ಬ ಕನ್ನಡಿಗನೂ ಅಭಿಮಾನಪಟ್ಟುಕೊಳ್ಳುವಂತಹ ಕೆಲಸಗಳು ಆಗಬೇಕಿದೆ. ಕನ್ನಡ ಉಳಿದರೆ ಮಾತ್ರ ಕನ್ನಡಿಗರು ಉಳಿಯಲು ಸಾಧ್ಯ. ಸಾಹಿತ್ಯ ಪರಿಷತ್‌ಗೆ ಸರಕಾರ 3 ಅಥವಾ 5 ಸಾವಿರ ಕೋ.ರೂ. ನೀಡಿದರೆ ಕನ್ನಡ ಪರವಾದ ಕೆಲಸವನ್ನು ನಿರಂತರವಾಗಿ ಪ್ರತಿ ತಾಲೂಕು, ಹೋಬಳಿ ಮಟ್ಟದಲ್ಲಿ ಸರಕಾರದ ಅನುದಾನದ ಬಡ್ಡಿಯಲ್ಲಿಯೇ ಮಾಡಬಹುದು. ಅಧ್ಯಕ್ಷನಾದರೆ ಈ ನಿಟ್ಟಿನಲ್ಲಿ ಕೆಲಸ ಮಾಡುವೆ. ವಂಶವೃಕ್ಷ ಯೋಜನೆಯ ಗುರಿಯನ್ನೂ ಹಾಕಿಕೊಂಡಿರುವೆ ಎಂದು ಮಾಯಣ್ಣ ನುಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಡಾ. ಸುರೇಶ್ ನೆಗಲಗುಳಿ, ಕಾ.ವಿ. ಕೃಷ್ಣದಾಸ್, ತ್ಯಾಗರಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News