ಕಾಪು ತಾಲ್ಲೂಕಿಗೆ ನಬಾರ್ಡ್ ನಿಯೋಜಿತ ತಂಡ ಭೇಟಿ
ಪಡುಬಿದ್ರಿ: ನಬಾರ್ಡ್ ನಿಯೋಜಿತ ಅಧ್ಯಯನ ತಂಡವು ಕಾಪು ತಾಲ್ಲೂಕಿನ ಪಡುಬಿದ್ರಿ, ಬೆಳಪು ಹಾಗೂ ಮೂಳೂರಿಗೆ ಮಾ. 20ರಂದು ಭೇಟಿ ನೀಡಲಿದೆ.
ನಬಾರ್ಡ್ ನಿಯೋಜಿತ ಅಧ್ಯಯನ ತಂಡವು 2 ದಿನಗಳ ಅಧ್ಯಯನಕ್ಕಾಗಿ ಅವಿಭಜಿತ ದ.ಕ. ಜಿಲ್ಲೆಗೆ ಆಗಮಿಸಲಿದ್ದು, ಕಳೆದ 5 ವರ್ಷಗಳಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಧಿಸಿದ ಅದ್ಭುತ ಪ್ರಗತಿಯ ಹಿನ್ನೆಲೆಯಲ್ಲಿ ಮಾ.20ರ ಸಂಜೆ ಪಡುಬಿದ್ರಿ ಸೇವಾ ಸಹಕಾರಿ ಸೊಸೈಟಿಗೆ ಭೇಟಿ ನೀಡಲಿದೆ.
ಅಧ್ಯಯನ ತಂಡದಲ್ಲಿ ಕಾರ್ಮಿಕ ಸಚಿವ ಅರಬೈಲು ಶಿವರಾಮ ಹೆಬ್ಬಾರ್ ಸಹಿತ ರಾಜ್ಯದ ನಾನಾ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳ ಅಧ್ಯಕ್ಷರು-ನಿರ್ದೇಶಕರು, ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ನಿರ್ದೇಶಕರು ಸೇರಿ 24 ಮಂದಿ ಇದ್ದಾರೆ.
ಈ ಸಂದರ್ಭ ಅಧ್ಯಯನ ತಂಡವನ್ನು ಪಡುಬಿದ್ರಿ ಬಸ್ಸು ನಿಲ್ದಾಣದಲ್ಲಿ ಸ್ವಾಗತಿಸಿ ಕೋವಿಡ್ ನಿಯಮಾನುಸಾರ ಸಾಮಾಜಿಕ ಅಂತರದೊಂದಿಗೆ ಮೆರವಣಿಗೆ ಮೂಲಕ ಬ್ಯಾಂಕ್ ಆವರಣಕ್ಕೆ ಕರೆದೊಯ್ಯಲಾಗುವುದು.
ತಂಡವು ಪಡುಬಿದ್ರಿ ಸೊಸೈಟಿಯ ಕೇಂದ್ರ ಕಛೇರಿ, ಶಾಖಾ ಕಛೇರಿಗಳಿಗೆ ಭೇಟಿ ನೀಡಲಿದೆ. ಬಳಿಕ ತಂಡಕ್ಕೆ ಪಡುಬಿದ್ರಿ ಸೊಸೈಟಿಯ ಕಳೆದ 5 ವರ್ಷಗಳ ಆರ್ಥಿಕ ಪ್ರಗತಿ, ಕಾರ್ಯವೈಖರಿ ಸಹಿತ ಸಮಗ್ರ ಮಾಹಿತಿಯನ್ನು ಸಾಕ್ಷ್ಯ ಚಿತ್ರ ಮೂಲಕ ಮನದಟ್ಟು ಮಾಡಲಾಗುವುದು. ನಂತರ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಇದೇ ವೇಳೆ ಅಧ್ಯಯನ ತಂಡವು ದೇವಿಪ್ರಸಾದ್ ಶೆಟ್ಟಿ ನೇತೃತ್ವದ ಬೆಳಪು ಸೊಸೈಟಿಗೆ ಭೇಟಿ ನೀಡಲಿದ್ದು, ನಬಾರ್ಡ್ ಯೋಜನೆಯ ಬಗ್ಗೆ ಅಧ್ಯಯನ ನಡೆಸಲಿದೆ. ಅಲ್ಲಿಂದ ತಂಡವು ಮೂಳೂರು ಸಾಯಿರಾಧಾ ಹೆರಿಟೇಜ್‍ಗೆ ಭೇಟಿ ನೀಡಲಿದೆ. ಅಲ್ಲಿ ನವೋದಯ ಸ್ವಸಹಾಯ ಸಂಘಗಳ ಸದಸ್ಯರು ಉತ್ಪಾದಿಸಿದ ಉತ್ಪನ್ನಗಳ ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.