ಕೋವಿಡ್ ನೆಪದಲ್ಲಿ ಕ್ರೀಡೆಯನ್ನು ದೂರ ಮಾಡಲಾಗಿದೆ - ಮೋಹನ್ ಆಳ್ವ
ಕಾರ್ಕಳ : ಕೋವಿಡ್ ನೆಪದಲ್ಲಿ ಕ್ರೀಡೆಯನ್ನು ದೂರ ಮಾಡಲಾಗಿದೆ. ಕುದುರೆ ಜೂಜು, ಕಂಬಳ, ಕೋಳಿ ಅಂಕಗಳಿಗೆ ಅನುಮತಿ ಇದೆ, ಆದರೆ ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳ ಕ್ರೀಡಾಶಕ್ತಿಯನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಮೂಡಬಿದಿರೆ ಆಳ್ವಾಸ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ.ಮೋಹನ್ ಆಳ್ವ ತಿಳಿಸಿದರು.
ತಾಲ್ಲೂಕಿನ ನಿಟ್ಟೆ ವಿದ್ಯಾಸಂಸ್ಥೆ ಹಾಗೂ ಕರಾವಳಿ ಕ್ರಿಕೆಟ್ ಅಕಾಡೆಮಿಯ ಸಂಯಕ್ತ ಆಶ್ರಯದಲ್ಲಿ ಆಯೋಜಿಸಿದ ಯಾಂಕರ್ ಮೀಡಿಯಾದ ಜಿಎನ್‌ಐ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು ದೇಶದಲ್ಲಿ ಯುವಸಂಪತ್ತು ತುಂಬಿದ್ದು 35 ಕೋಟಿ ಯುವಕರು, ರಾಜ್ಯದಲ್ಲಿ ಒಂದು ಕೋಟಿ ಯುವಕರಿದ್ದಾರೆ. ಅದರ ಉಪಯೋಗವಾಗಬೇಕು. ಕ್ರಿಕೆಟ್ ಪಂದ್ಯಾಟದಲ್ಲಿ ಇತ್ತೀಚೆಗೆ ಅಂಡರ್‌ಆರ್ಮ್ ಪಂದ್ಯಾಟಗಳು ಬಂದು ಕ್ರಿಕೆಟ್ನಲ್ಲಿ ಭವಿಷ್ಯವಿಲ್ಲದಂತಾಗಿದೆ. ಇನ್ನೊಂದೆಡೆ ಸಮರ್ಥರಿದ್ದೂ ಯುವಕರಿಗೆ ಅವಕಾಶವಿಲ್ಲ. ಇನ್ನಾದರೂ ಎಚ್ಚೆತ್ತು ಕ್ರೀಡೆಯನ್ನು ಸಮಗ್ರವಾಗಿ ಉಪಯೋಗಿಸಿಕೊಳ್ಳಬೇಕಾಗಿದೆ. ನಿರಂತರ ಕ್ರೀಡಾ ಚಟುವಟಿಕೆ ನಡೆಯುವಂತಾಗಬೇಕು ಎಂದರು.
ನಿಟ್ಟೆ ವಿವಿಯ ಕುಲಾಧಿಪತಿ ವಿನಯ ಹೆಗ್ಡೆ ಮಾತನಾಡಿ ನಿಟ್ಟೆ ವಿದ್ಯಾಸಂಸ್ಥೆ ಮೊದಲಿನಿಂದಲೂ ಕ್ರೀಡೆಗೆ ಪ್ರೋತ್ಸಾಹವನ್ನು ನೀಡುತ್ತಿದ್ದು ಶ್ರೇಷ್ಠ ಕ್ರಿಕೆಟಿಗ ಬಿಚಿ ಆಳ್ವರ ಹೆಸರಿನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಿ ಎಲ್ಲ ಬಗೆಯ ಕ್ರೀಡೆಗಳಿಗೂ ಸೌಲಭ್ಯ, ಮಾರ್ಗದರ್ಶನ ನೀಡುತ್ತಿದೆ. ಮುಂದಿನ ದಿನಗಳಲ್ಲಿ ಸುಂದರ ಈಜುಕೊಳ ಹಾಗೂ ಫ್ಲಡ್‌ಲೈಟ್‌ನ ವ್ಯವಸ್ಥೆಯನ್ನೂ ಮಾಡಲಿದೆ. ಆಸಕ್ತ ಕ್ರೀಡಾಪಟುಗಳಿಗೆ ಎಲ್ಲ ಸೌಲಭ್ಯ ಒದಗಿಸಲಿದೆ ಎಂದರು.
ಪಂದ್ಯಾಟದಲ್ಲಿ ಮೊದಲ ಸ್ಥಾನ ಪಡೆದ ರಾಯಲ್ ಇಂಡಿಯನ್ಸ್ ಬೆಂಗಳೂರು ಹಾಗೂ ದ್ವಿತೀಯ ಸ್ಥಾನ ಪಡೆದ ಮೂಡಬಿದಿರೆಯ ಆಳ್ವಾಸ್ ತಂಡಗಳಿಗೆ ಈ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು. ಗೋವಾದ ರಣಜಿ ಪಂದ್ಯಾಟದ ಕ್ರೀಡಾಲೂ ದಯಾನಂದ ಬಂಗೇರ ಹಾಗೂ ಮಿಸ್ ಫಿಟ್ ವುಮನ್ ನಯನಾ ಶೆಟ್ಟಿ ಅವರನ್ನು ಗೌರವಿಸಲಾಯಿತು.
ರಿಜಿಸ್ಟ್ರಾರ್ ಯೋಗೀಶ ಹೆಗ್ಡೆ, ಕರಾವಳಿ ಕ್ರಿಕೆಟ್ ಅಕಾಡೆಮಿಯ ಕಾರ್ಯದಶೀ ಸಂತೋಷ್ ಮಿಸ್ಕಿತ್, ಯಾಂಕರ್ ಮೀಡಿಯಾದ ಲಾಲ್ ಸಚಿನ್, ಶಾಂತಿಮೋಹನ್ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ನಿರಂಜನ್ ಚಿಪಳೂಣ್‌ಕರ್ ಸ್ವಾಗತಿಸಿದರು. ರೋಶನ್ ನಿರೂಪಿಸಿದರು.