ಮಾ.20-21ರಂದು ನಂದಿನಿ ನದಿ ಉತ್ಸವ
ಮಂಗಳೂರು, ಮಾ.18: ಪ್ರವಾಸೋದ್ಯಮ ಇಲಾಖೆ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಹಾಲು ಉತ್ಪಾದಕರ ಫೆಡರೇಶನ್ ಸಹಕಾರದಲ್ಲಿ ಸಸಿಹಿತ್ಲು ಆಂಜನೇಯ ವ್ಯಾಯಾಮ ಶಾಲೆ ವತಿಯಿಂದ ಮಾ. 20 ಹಾಗೂ 21ರಂದು ಸಸಿಹಿತ್ಲುವಿನ ನಂದಿನಿ ನದಿ ತೀರದಲ್ಲಿ ಉತ್ಸವವನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಟಿಯಲ್ಲಿಂದು ಈ ವಿಷಯ ತಿಳಿಸಿದ ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್ ಕುಮಾರ್, ಮಾ. 20ರಂದು ಸಂಜೆ 6 ಗಂಟೆಗೆ ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೀಶ್ವರ ನಂದಿನಿ ನದಿ ಉತ್ಸವ ಉದ್ಘಾಟಿಸಲಿದ್ದಾರೆ ಎಂದರು.
ಇದೇ ವೇಳೆ ಆಹಾರೋತ್ಸವಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆಯನ್ನು ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ನೆರವೇರಿಸಲಿದ್ದಾರೆ.
ಉತ್ಸವದ ಸಂದರ್ಭ ಸಸಿಹಿತ್ಲುವಿನ ಸೇತುವೆ ಬಳಿಯ ನಂದಿನಿ ನದಿಯಲ್ಲಿ ಕಯಾಕಿಂಗ್, ಸ್ಟಾಂಡ್ ಅಪ್ ಪೆಡಲ್, ಬೋಟ್ ರೇಸ್, ಈಜು ಸ್ಪರ್ಧೆ ಹಾಗೂ ನದಿ ತೀರದ ಪ್ರದೇಶದಲ್ಲಿ ನಿರ್ಮಿಸಲಾಗಿರುವ ವೇದಿಕೆಯಲ್ಲಿ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ ಎಂದರು.
ಅಗತ್ಯ ಸುರಕ್ಷಾ ಕ್ರಮಗಳಿಗೆ ಒತ್ತು ನೀಡಲಾಗಿದ್ದು, ನದಿಯಲ್ಲಿ ನಡೆಯುವ ಪ್ರತಿಯೊಂದು ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ಜಾಕೆಟ್ ಸೇರಿದಂತೆ ಅಗತ್ಯ ಸುರಕ್ಷಾ ಸಾಧನಗಳ ಬಳಕೆಗೆ ಒತ್ತು ನೀಡಲಾಗುತ್ತದೆ. ಇದಲ್ಲದೆ ಸುಮಾರು 5ರಷ್ಟು ರಕ್ಷಣಾ ಬೋಟ್‌ಗಳು ಕೂಡಾ ಸಿದ್ದವಿರಲಿವೆ ಎಂದು ಅವರು ತಿಳಿಸಿದರು.
ಗೋಷ್ಠಿಯಲ್ಲಿ ವ್ಯಾಯಾಮ ಶಾಲೆಯ ಉಪಾಧ್ಯಕ್ಷ ಸಂತೋಷ್, ಮುಂಬೈ ಸಮಿತಿ ಸಂಚಾಲಕ ಅನಿಲ್ ಕುಮಾರ್, ಸಂಚಾಲಕ ನಿತಿನ್ ಸುವರ್ಣ, ವಾರ್ತಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.