×
Ad

ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಗೆ ನಬಾರ್ಡ್ ಪ್ರೋತ್ಸಾಹ: ನೀರಜ್ ಕುಮಾರ್ ವರ್ಮಾ

Update: 2021-03-18 19:02 IST

ಉಡುಪಿ, ಮಾ.18: ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳ ಅಭಿಯಾನದ ಅಗತ್ಯವಿದ್ದು, ಇದಕ್ಕೆ ನವಾರ್ಡ್ ಸಂಸ್ಥೆ ಪ್ರೋತ್ಸಾಹ ನೀಡಲಿದೆ ಎಂದು ಬೆಂಗಳೂರು ನಬಾರ್ಡ್ ಮುಖ್ಯ ಜನರಲ್ ಮ್ಯಾನೇಜರ್ ನೀರಜ್‌ ಕುಮಾರ್ ವರ್ಮಾ ಹೇಳಿದ್ದಾರೆ.

ನಬಾರ್ಡ್ ಬೆಂಗಳೂರು ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಧರ್ಮಸ್ಥಳ ಇವರ ಜಂಟಿ ಸಹಯೋಗದಲ್ಲಿ ಜೀವನಾಧಾರ ಮತ್ತು ಉದ್ಯಮ ಶೀಲತಾ ಅಭಿವೃದ್ಧಿ ಕಾರ್ಯಕ್ರಮ 2020-21ರಡಿ ಬ್ರಹ್ಮಗಿರಿಯಲ್ಲಿರುವ ಪ್ರಗತಿ ಸೌಧದಲ್ಲಿ ಬುಧವಾರ ನಡೆದ ಭತ್ತ ಸಸಿ ನಾಟಿ ಯಂತ್ರ ನಿರ್ವಹಣೆ, ದುರಸ್ಥಿ ಹಾಗೂ ಸೇವೆ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭತ್ತ ಕೃಷಿಯ ಯಾಂತ್ರೀಕರಣದೊಂದಿಗೆ ಯಂತ್ರಗಳ ನಿರ್ವಹಣೆಯಲ್ಲಿ ಬದುಕಿನ ಭವಿಷ್ಯವಿದೆ ಎಂದ ನೀರಜ್‌ಕುಮಾರ್ ವರ್ಮ ಗ್ರಾಮೀಣ ಬದುಕಿನಲ್ಲಿ ಸಮೃದ್ಧಿ, ಸಂತಸವಿದೆ. ಯಾಂತ್ರೀಕರಣದಿಂದ ರೈತರ ಆದಾಯ ವೃದ್ಧಿ ಜೊತೆಗೆ ರೈತರ ಬದುಕಿನ ಗುಣಮಟ್ಟವೂ ಹೆಚ್ಚಿದೆ. ಆದುದರಿಂದ ತಂತ್ರಜ್ಞಾನಗಳ ಇನ್ನೂ ಹೆಚ್ಚಿನ ಪ್ರಯೋಜನವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಶ್ರೀಪದ್ಧತಿ ಕುರಿತು ನಡೆದ ಸಂವಾದದಲ್ಲಿ ಕುಂದಾಪುರದ ರೈತ ನರಸಿಂಹ ಅವರು 9ವರ್ಷಗಳಿಂದ ಭತ್ತ ಕೃಷಿಯಲ್ಲಿ ಶ್ರೀಪದ್ಧತಿ ಅಳವಡಿಸಿದ್ದು ಕೂಲಿಯಾಳುಗಳ ಸಂಖ್ಯೆ ಕಡಿಮೆ ಸಾಕು, ಎಕರೆಗೆ 40ಕೆ. ಜಿ. ಬದಲು 8ಕೆ. ಜಿ. ಬೀಜವನ್ನಷ್ಟೇ ಬಳಸಲಾಗುತ್ತಿದೆ. 5 ಕ್ವಿಂಟಾಲ್ ಇಳುವರಿ 10 ಕ್ವಿಂಟಾಲಿಗೆ ಏರಿದೆ ಎಂದರು.

ಎಸ್‌ಕೆಡಿಆರ್‌ಡಿಪಿ ಬಿ.ಸಿ. ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಮಾತನಾಡಿ, ಐದು ಕೃಷಿ ಯಂತ್ರ ಕೇಂದ್ರಗಳಲ್ಲಿ ಭತ್ತ ನೇಜಿ ನಾಟಿ, ಕೊಯ್ಲು ಯಂತ್ರ ಸಹಿತ ತಲಾ 1ಕೋಟಿ ರೂ. ಮೌಲ್ಯದ ಯಂತ್ರಗಳಿದ್ದು 28ಜನರಿಗೆ ಯಂತ್ರ ನಿರ್ವಹಣೆ ತರಬೇತಿ ನೀಡಲಾಗಿದೆ. 300 ಗಂಟೆಗಳ ಯಂತ್ರ ಬಳಕೆಯು 3ಲಕ್ಷ ರೂ. ಆದಾಯ ಸಹಿತ 1ಲಕ್ಷ ರೂ. ನಿವ್ವಳ ಲಾಭ ತಂದುಕೊಡಲಿದೆ. ಕೃಷಿ ಭವಿಷ್ಯ ಯಂತ್ರವನ್ನು ಅವಲಂಬಿಸಿದೆ ಎಂದರು.

ಬೆಂಗಳೂರು ನಬಾರ್ಡ್‌ನ ಎಜಿಎಂ ಶಿವಾನಿ ಎಚ್. ಎಂ., ನಬಾರ್ಡ್ ದ.ಕ./ಉಡುಪಿ ಡಿಡಿಎಂ ಸಂಗೀತಾ ಎಸ್. ಕರ್ತಾ, ಎಸ್‌ಕೆಡಿಆರ್‌ಡಿಪಿ ಧರ್ಮಸ್ಥಳ ಕೇಂದ್ರ ಕಚೇರಿಯ ಪ್ರಾದೇಶಿಕ ಕೃಷಿ ನಿರ್ದೇಶಕ ಮನೋಜ್ ಮಿನೇಜಸ್, ಉಡುಪಿ ಪ್ರಾದೇಶಿಕ ಕಚೇರಿಯ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ್ ಉಪಸ್ಥಿತರಿದ್ದರು.

ಉಡುಪಿ ಎಸ್‌ಕೆಡಿಆರ್‌ಡಿಪಿಯ ಹಿರಿಯ ನಿರ್ದೇಶಕ ಗಣೇಶ್ ಬಿ. ಸ್ವಾಗತಿಸಿದರು. ಎಸ್‌ಕೆಡಿಆರ್‌ಡಿಪಿ ಬಿಸಿ ಟ್ರಸ್ಟಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಲ್. ಎಚ್. ಮಂಜುನಾಥ್ ಪ್ರಾಸ್ತಾವಿಕ ಮಾತನ್ನಾಡಿದರು. ಅಶೋಕ್ ನಿರೂಪಿಸಿ, ಶಶಿರೇಖಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News