×
Ad

ಕೋವಿಡ್ ಸಂಕಷ್ಟದಲ್ಲಿ ಸಹಾಯಹಸ್ತ ಚಾಚುತ್ತಿರುವ ‘ರಕ್ಷಾ ಹೆಲ್ಪ್‌ಲೈನ್ ಸರ್ವೀಸಸ್’

Update: 2021-03-18 19:39 IST
ಅಬ್ದುಲ್ ರಝಾಕ್ ಉಜಿರೆ

ಮಂಗಳೂರು: ಕೋವಿಡ್-19 ಮತ್ತು ಅದರ ನಿಯಂತ್ರಣಕ್ಕೆ ವಿಧಿಸಲಾದ ಲಾಕ್‌ಡೌನ್ ಸಂದರ್ಭ ಎದುರಾದ ಆರ್ಥಿಕ ಸಂಕಷ್ಟದ ಸಂದರ್ಭ ಜನಸಾಮಾನ್ಯರಿಗೆ ನೆರವು ನೀಡುವ ಉದ್ದೇಶದಿಂದ ದುಬೈಯಲ್ಲಿ ಹುಟ್ಟಿಕೊಂಡ ‘ರಕ್ಷಾ ಹೆಲ್ಪ್‌ಲೈನ್ ಸರ್ವಿಸಸ್’ ಇದೀಗ ಶಾಲಾ-ಕಾಲೇಜುಗಳ ಶುಲ್ಕ ಪಾವತಿಸಲಾಗದ ಅರ್ಹ ವಿದ್ಯಾರ್ಥಿಗಳಿಗೆ ನೆರವು ನೀಡುವ ಮೂಲಕ ಗಮನಸೆಳೆಯುತ್ತಿದೆ.

ಆನ್‌ಲೈನ್ ತರಗತಿಗಳು ಸೇರಿದಂತೆ ಪ್ರಸಕ್ತ ಶೈಕ್ಷಣಿಕ ವರ್ಷ ಮುಕ್ತಾಯ ಹಂತದಲ್ಲಿದೆ. ಆದರೆ ಹಲವಾರು ವಿದ್ಯಾರ್ಥಿಗಳು ಶುಲ್ಕ ಪಾವತಿಸಲು ಸಾಧ್ಯವಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಇದನ್ನು ಮನಗಂಡ ನಾವು ಸಂಕಷ್ಟದಲ್ಲಿರುವವರಿಗೆ ಶುಲ್ಕ ಪಾವತಿಗೆ ನೆರವು ನೀಡುತ್ತಿದ್ದೇವೆ ಎಂದು ‘ರಕ್ಷಾ ಹೆಲ್ಪ್‌ಲೈನ್ ಸರ್ವಿಸಸ್’ನ ರೂವಾರಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಅಬ್ದುರ್ರಝಾಕ್ ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕಳೆದ 14 ವರ್ಷಗಳಿಂದ ದುಬೈಯಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿರುವ ಅಬ್ದುರ್ರಝಾಕ್ ಕೋವಿಡ್ ಲಾಕ್‌ಡೌನ್ ಸಂದರ್ಭ ‘ರಕ್ಷಾ ಹೆಲ್ಪ್‌ಲೈನ್ ಸರ್ವಿಸಸ್’ ಎಂಬ ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಆ ಮೂಲಕ ಸಮಾಜಸೇವೆಯಲ್ಲಿ ತೊಡಗಿದ್ದರು. ಬಳಿಕ ತನ್ನ ಕಾಲೇಜು ಸಹಪಾಠಿಗಳಾದ ಸದ್ಯ ದುಬೈಯಲ್ಲಿರುವ ವಿಟ್ಲ- ವೀರಕಂಭದ ಅಬ್ದುಲ್ ಖಾದರ್, ಬಿ.ಸಿ.ರೋಡ್‌ನ ಮುಹಮ್ಮದ್ ಕುತುಬುದ್ದೀನ್ ಮತ್ತು ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಉಜಿರೆಯ ಸವಾದ್ ಎಂಬವರ ಸಹಕಾರದಲ್ಲಿ ‘ರಕ್ಷಾ ಹೆಲ್ಪ್‌ಲೈನ್ ಸರ್ವಿಸಸ್’ ಎಂಬ ಸಂಘಟನೆಯನ್ನು ಹುಟ್ಟು ಹಾಕಿದರು. ಆ ಮೂಲಕ ಕೋವಿಡ್ ಸಂಕಷ್ಟಕ್ಕೊಳಗಾದವರಿಗೆ ದಾನಿಗಳ ನೆರವಿನಿಂದ ಸಹಾಯಹಸ್ತ ಚಾಚಲು ಆರಂಭಿಸಿದೆ. ಉಜಿರೆಯ ಅಬ್ದುರ್ರಝಾಕ್ ದುಬೈಯಲ್ಲಿ ಸಂಕಷ್ಟಕ್ಕೀಡಾದವರಿಗೆ ಮಾತ್ರವಲ್ಲ ತವರೂರಲ್ಲಿರುವವರಿಗೂ ನೆರವು ನೀಡಿ ಗಮನ ಸೆಳೆಯುತ್ತಿದ್ದಾರೆ. ‘‘ಲಾಕ್‌ಡೌನ್‌ನಿಂದ ಊರಿಗೆ ಮರಳಲು ಆಗದೆ ತೊಂದರೆಗೊಳಗಾದವರಿಗೆ, ಉದ್ಯೋಗ ಕಳಕೊಂಡವರಿಗೆ, ಉದ್ಯೋಗವಿದ್ದರೂ ಸಕಾಲಕ್ಕೆ ಸಂಬಳ ಸಿಗದವರಿಗೆ, ಆಹಾರವಿಲ್ಲದವರಿಗೆ, ರೋಗಿಗಳಿಗೆ, ವಸತಿ ಕಳಕೊಂಡವರಿಗೆ ಹೀಗೆ ಸಂಕಷ್ಟಕ್ಕೊಳಗಾದವರಿಗೆ ‘ರಕ್ಷಾ ಹೆಲ್ಪ್‌ಲೈನ್ ಸರ್ವಿಸಸ್’ ನೆರವು ನೀಡುತ್ತಿದೆ. ಬೆಳ್ತಂಗಡಿ ತಾಲೂಕಿನ ಗ್ರಾಮವೊಂದರಲ್ಲಿ ಸುಮಾರು 200 ಕುಟುಂಬಗಳಿಗೆ ತಲಾ ಸಾವಿರ ರೂ. ಮೌಲ್ಯದ ಆಹಾರ ಕಿಟ್‌ಗಳನ್ನು ಜಾತಿ-ಮತ ಭೇದವಿಲ್ಲದೆ ವಿತರಿಸಿದೆ’’ ಎಂದು ರಝಾಕ್ ತಿಳಿಸಿದ್ದಾರೆ.

‘‘ನಾನು ಬಾಲ್ಯದಲ್ಲಿ ಬಡತನದಲ್ಲಿ ಬೆಳದವನು, ಮನೆಯಲ್ಲಿ ವಿದ್ಯುತ್ ಕೂಡಾ ಇರಲಿಲ್ಲ. ಆದರೂ ಕಷ್ಟಪಟ್ಟು ಎಂ.ಕಾಂ ಮಾಡಿದೆ. ಗಲ್ಫ್‌ಗೆ ಬಂದು ಉದ್ಯೋಗಕ್ಕೆ ಸೇರಿಕೊಂಡೆ. ಸ್ವತಃ ಕಷ್ಟದಲ್ಲಿದ್ದ ನನಗೆ ಇನ್ನೊಬ್ಬರ ಕಷ್ಟದ ಅರಿವು ಇತ್ತು. ಸಮಾಜಕ್ಕಾಗಿ ಏನಾದರೊಂದು ಮಾಡಬೇಕು ಎಂಬ ತುಡಿತವಿತ್ತು. ಕೋವಿಡ್-19 ಸಂದರ್ಭ ಅಂತಹ ಅವಕಾಶ ಒದಗಿಸಿತು. 2000ರ ನನ್ನ ಎಂ.ಕಾಂ. ಬ್ಯಾಚ್‌ಮೇಟ್‌ಗಳ ಸಹಕಾರ ಪಡೆದು, ವಾಟ್ಸ್‌ಆ್ಯಪ್ ಗ್ರೂಪ್ ರಚಿಸಿ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾದೆ ಸಕ್ರಿಯನಾದೆ ಎನ್ನುತ್ತಾರೆ ಅಬ್ದುರ್ರಝಾಕ್ ಉಜಿರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News