×
Ad

ಕುಂದಾಪುರ: ಸಮುದ್ರ ಸೇರಿದ 120ಕ್ಕೂ ಅಧಿಕ ಕಡಲಾಮೆ ಮರಿಗಳು

Update: 2021-03-18 20:16 IST

ಕುಂದಾಪುರ, ಮಾ.18: ಕೋಡಿ ಲೈಟ್‌ಹೌಸ್ ಬೀಚ್‌ನ ಕಡಲ ತೀರದಲ್ಲಿ ಜನವರಿ ಕೊನೆಯ ವಾರದಿಂದ ಎರಡು ನೆಟ್‌ಗಳಲ್ಲಿ ರಕ್ಷಿಸಲಾಗಿದ್ದ ಕಡಲಾಮೆಯ ಮೊಟ್ಟೆಗಳಲ್ಲಿ 120ಕ್ಕೂ ಅಧಿಕ ಮರಿಗಳು ಬುಧವಾರ ರಾತ್ರಿ ಹೊರಬಂದಿದ್ದು, ಅವುಗಳನ್ನು ಸುರಕ್ಷಿತವಾಗಿ ಸಮುದ್ರದ ಮಡಿಲಿಗೆ ಸೇರಿಸಲಾಗಿದೆ.

ಕಳೆದ ಜ.24 ಮತ್ತು 26ರಂದು ರಾತ್ರಿ ವೇಳೆ ತೀರಕ್ಕೆ ಬಂದ ಅಪರೂಪದ ಆಲಿವ್ ರಿಡ್ಲೇ ಪ್ರಬೇಧಕ್ಕೆ ಸೇರಿದ ಕಡಲಾಮೆಗಳು ಮರಳಿನಲ್ಲಿ ಗೂಡು ರಚಿಸಿ ತಲಾ 100ಕ್ಕೂ ಅಧಿಕ ಮೊಟ್ಟೆಗಳನ್ನು ಇಟ್ಟು ಮರಳಿದ್ದವು. ಈ ಮೊಟ್ಟೆಗಳಲ್ಲಿ 120 ಮೊಟ್ಟೆಗಳಿಂದ ನಿನ್ನೆ ರಾತ್ರಿ ಮರಿಗಳು ಹೊರಬಂದಿವೆ. ಈ ಹ್ಯಾಚರಿಗಳಲ್ಲಿ ಇನ್ನೂ 70ರಿಂದ 90ರಷ್ಟು ಮೊಟ್ಟೆಗಳು ಇದ್ದು, ಇವುಗಳಲ್ಲಿ ಕೆಲವು ಇನ್ನೂ ಒಂದೆರಡು ದಿನಗಳಲ್ಲಿ ಒಡೆದು ಮರಿಗಳು ಹೊರಬರುವ ಸಾಧ್ಯತೆ ಇದೆ ಎಂದು ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ತಿಳಿಸಿದ್ದಾರೆ.

ಜ.22ರಿಂದ ಮಾ.3ರವರೆಗೆ ಕೋಡಿ ಲೈಟ್‌ಹೌಸ್ ಬೀಚ್‌ನಲ್ಲಿ 10 ಹಾಗೂ ಗೋಪಾಡಿ ಬೀಚ್‌ನಲ್ಲಿ ಒಂದು ಕಡೆ ಕಡಲಾಮೆಗಳು ಬಂದು ಮೊಟ್ಟೆ ಇಟ್ಟು ತೆರಳಿವೆ. ಇವುಗಳ ಪೈಕಿ ಜ.24ರಂದು ನಿರ್ಮಿಸಿದ ಹ್ಯಾಚರಿಯಿಂದ 19 ಹಾಗೂ ಜ.26ರ ಹ್ಯಾಚರಿಯಿಂದ 101 ಮೊಟ್ಟೆ ಒಡೆದು ಮರಿಗಳು ಹೊರಬಂದಿವೆ. ಇನ್ನುಳಿದ ಕೋಡಿಯ ಎಂಟು ಹಾಗೂ ಗೋಪಾಡಿ ಒಂದು ಕಡೆಯ ಹ್ಯಾಚರಿಯಲ್ಲಿ ಸುಮಾರು ಒಂದು ಸಾವಿರಕ್ಕೂ ಅಧಿಕ ಮೊಟ್ಟೆಗಳನ್ನು ನೆಟ್ ಇರಿಸಿ ಸಂರಕ್ಷಿಸಲಾಗಿದೆ. ಇವುಗಳಿಂದ ಮುಂದಿನ ಎಪ್ರಿಲ್-ಮೇ ತಿಂಗಳ ಮೊದಲ ವಾರದವರೆಗೆ ಮರಿಗಳು ಹೊರಬರುವ ನಿರೀಕ್ಷೆ ಇದೆ. ಈ ಕಡಲಾಮೆ ಮರಿಗಳನ್ನು ಸುರಕ್ಷಿತವಾಗಿ, ಅವುಗಳಾಗಿಯೇ ಕಡಲು ಸೇರಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿದ್ದೇವೆ ಎಂದವರು ಹೇಳಿದರು.

ಬುಧವಾರ ರಾತ್ರಿ ಹೊರ ಬಂದ 120 ಮರಿಗಳನ್ನು ಸ್ಪರ್ಶಿಸದೇ ಅವುಗಳಾಗಿಯೇ ಸಮುದ್ರ ಸೇರಲು ಮಾರ್ಗದರ್ಶನ ಮಾಡಲಾಯಿತು ಎಂದು ಅವರು ಹೇಳಿದರು. ಕುಂದಾಪುರ ಉಪಅರಣ್ಯ ಸಂರಕ್ಷಣಾಧಿಕಾರಿ ಅಶೀಶ್ ರೆಡ್ಡಿ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಎಫ್‌ಎಸ್‌ಎಲ್ ಇಂಡಿಯಾ, ಕ್ಲೀನ್ ಕುಂದಾಪುರ ಪ್ರಾಜೆಕ್ಟ್, ರೀಫ್ ವಾಚ್ ಸಂಸ್ಥೆಯ ಸದಸ್ಯರು ತಡರಾತ್ರಿಯ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಭಾಕರ ಕುಲಾಲ್ ತಿಳಿಸಿದರು.

ಸಾಮಾನ್ಯವಾಗಿ ಸಮುದ್ರದಿಂದ ಬಂದು ಸುರಕ್ಷಿತ ಎನಿಸಿದ ಕಡಲ ಕಿನಾರೆಯಲ್ಲಿ ಕಡಲಾಮೆಗಳು ಮರಳಿನಡಿ ಮೊಟ್ಟೆ ಇಟ್ಟು ತೆರಳುತ್ತವೆ. ಇವುಗಳಿಂದ ಸಾಮಾನ್ಯವಾಗಿ 50ರಿಂದ 60 ದಿನಗಳಲ್ಲಿ ಮರಿಗಳು ಹೊರಬರುತ್ತವೆ. ಕೋಡಿ ಬೀಚ್‌ನಲ್ಲಿ ಆಮೆಗಳು ಇಟ್ಟಿರುವ ಮೊಟ್ಟೆಗಳನ್ನು ಇಲಾಖೆಯ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಸಂರಕ್ಷಿಸುವ ಕೆಲಸ ಮಾಡುತ್ತಿವೆ. ಇದೀಗ ಇವರ ಸುಮಾರು ಎರಡು ತಿಂಗಳ ಶ್ರಮ ಸಾರ್ಥಕವಾಗಿದ್ದು ಮರಿಗಳು ಸುರಕ್ಷಿತವಾಗಿ ಹೊರಬರಲಾರಂಭಿಸಿವೆ. ಇವುಗಳನ್ನು ಅಷ್ಟೇ ಸುರಕ್ಷಿತವಾಗಿ ಸಮುದ್ರಕ್ಕೆ ಮರಳಿ ಸೇರಿಸುವ ಕೆಲಸವನ್ನು ಇವರು ಮಾಡುತ್ತಿರುವುದು ಜನರ ಪ್ರಶಂಸೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News