ಎಂಐಟಿ ಕ್ಯಾಂಪಸ್‌ನಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ

Update: 2021-03-18 14:51 GMT

ಉಡುಪಿ, ಮಾ.18: ಕಳೆದೊಂದು ವಾರದಿಂದ ಮಣಿಪಾಲದ ಎಂಐಟಿ ಕಾಲೇಜಿನ ಕ್ಯಾಂಪಸ್‌ನಲ್ಲಿರುವ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಕೋವಿಡ್-19ಕ್ಕೆ ಪಾಸಿಟಿವ್ ಬರುತ್ತಿರುವುದರಿಂದ ಈಗಾಗಲೇ ಎಂಐಟಿ ಕ್ಯಾಂಪಸ್‌ನ್ನು ಸೀಲ್‌ಡೌನ್ ಮಾಡಿ ಕಂಟೈನ್‌ಮೆಂಟ್ ಝೋನ್ ಎಂದು ಘೋಷಿಸಿದ್ದು, ಅಲ್ಲಿರುವ 5000 ವಿದ್ಯಾರ್ಥಿಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಮಣಿಪಾಲ ಹಾಗೂ ಎಂಐಟಿ ಕ್ಯಾಂಪಸ್‌ನಲ್ಲಿ ಇಂದು ಸಂಜೆಯವರೆಗೆ ಒಟ್ಟು 106 ಮಂದಿ ಪಾಸಿಟಿವ್ ಬಂದಿದ್ದಾರೆ. ಇವರಿಗೆ ನಡೆಯಬೇಕಿದ್ದ ಇನ್ನುಳಿದ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡುವ ನಿರ್ಧಾರವನ್ನು ಮಾಹೆ ನಿನ್ನೆ ರಾತ್ರಿ ಪ್ರಕಟಿಸಿತ್ತು.

ಎಂಐಟಿಯಲ್ಲಿ ಇನ್ನು ಆಫ್‌ಲೈನ್ ಕ್ಲಾಸ್‌ಗಳು ನಡೆಯುವುದಿಲ್ಲ. ಕೇವಲ ಆನ್‌ಲೈನ್ ಕ್ಲಾಸ್‌ಗಳಿಗೆ ಮಾತ್ರ ಅವಕಾಶವಿರುತ್ತದೆ. ಪಾಸಿಟಿವ್ ಬಂದ ವಿದ್ಯಾರ್ಥಿಗಳಲ್ಲಿ ರೋಗದ ಲಕ್ಷಣಗಳಿಲ್ಲದ ಕಾರಣ ಎಲ್ಲರೂ ಹಾಸ್ಟೆಲ್‌ಗಳಲ್ಲೇ ಉಳಿಯಲಿದ್ದಾರೆ. ಇಲ್ಲಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಕೋವಿಡ್ ಪರೀಕ್ಷೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ವೀಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಮಣಿಪಾಲದಲ್ಲಿರುವ ಅಂಗಡಿ-ಮುಂಗಟ್ಟುಗಳು ಹಾಗೂ ಇತರರು ಕೋವಿಡ್ ಬಗ್ಗೆ ಹೆಚ್ಚಿನ ನಿಗಾ ವಹಿಸುವಂತೆ ಅವರು ತಿಳಿಸಿದ್ದಾರೆ.

ಗೊಂದಲ ನಿರ್ಮಾಣ: ಈ ನಡುವೆ ಸೆಮಿಸ್ಟರ್ ಪರೀಕ್ಷೆಗಳನ್ನು ಮಾಹೆ ಮುಂದೂಡಿರುವುದರಿಂದ, ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವ ವಿದ್ಯಾರ್ಥಿಗಳು ಹಾಸ್ಟೆಲ್ ತೊರೆದು ಮನೆಗಳಿಗೆ ತೆರಳಲು ಮುಂದಾದಾಗ ಪೊಲೀಸರು ತಡೆದಿದ್ದು ಪರಿಸರದಲ್ಲಿ ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಲು ಕಾರಣವಾಯಿತು.

ಬಳಿಕ ಜಿಲ್ಲಾಡಳಿತ ಆರ್‌ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದವರು ತೆರಳಲು ಅಡ್ಡಿಯಿಲ್ಲ ಎಂದು ಸ್ಪಷ್ಟ ಪಡಿಸಿದ್ದರಿಂದ, ಪೊಲೀಸರು ಪ್ರತಿಯೊಬ್ಬರನ್ನೂ ಪರಿಶೀಲಿಸಿ ನೆಗೆಟಿವ್ ವರದಿ ಇದ್ದವರನ್ನು ಮನೆಗಳಿಗೆ ತೆರಳಲು ಅವಕಾಶ ಮಾಡಿಕೊಟ್ಟರು.

ಗುರುವಾರ ಜಿಲ್ಲೆಯಲ್ಲಿ ಒಟ್ಟು 38 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಇವರಲ್ಲಿ 11 ಮಂದಿ ಎಂಐಟಿಯ ವಿದ್ಯಾರ್ಥಿಗಳಿದ್ದರೆ, ಮೂವರು ದುಬೈಯಿಂದ ಮರಳಿದವರು. ಇಬ್ಬರು ಉಪನ್ಯಾಸಕರು, 7 ಮಂದಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರು ಹಾಗೂ ಗ್ರಾಮೀಣ ಪ್ರದೇಶದವರು ಸೇರಿದಂತೆ ಒಟ್ಟು 15 ಮಂದಿ ಇದ್ದಾರೆ. ಸಾಕಷ್ಟು ಮಂದಿ ಮುಂಬಯಿಯಿಂದ ಊರಿಗೆ ಮರಳಿ ಬರುತ್ತಿರುವುದರಿಂದ ಗ್ರಾಮೀಣ ಭಾಗದಲ್ಲೂ ಸೋಂಕಿತರು ಪತ್ತೆಯಾಗತೊಡಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News