ಅಂತರ್‌ಜಿಲ್ಲಾ ಕ್ರಿಕೆಟ್ ಪಂದ್ಯಾಟ: ದ.ಕನ್ನಡ ವಿರುದ್ಧ ಉಡುಪಿಗೆ ಹೋರಾಟಕಾರಿ ಜಯ
ಉಡುಪಿ, ಮಾ.18: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಅಂತರ್‌ಜಿಲ್ಲಾ ಕ್ರಿಕೆಟ್ ಪಂದ್ಯಾಟದಲ್ಲಿ ಉಡುಪಿ ಜಿಲ್ಲಾ ತಂಡವು ದಕ್ಷಿಣ ಕನ್ನಡ ಜಿಲ್ಲಾ ತಂಡದ ವಿರುದ್ಧ 3 ವಿಕೆಟ್‌ಗಳ ಪ್ರಯಾಸಕರ ಜಯ ಸಾಧಿಸಿದೆ.
ಮಂಗಳೂರಿನ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ದಕ್ಷಿಣ ಕನ್ನಡ ಜಿಲ್ಲಾ ತಂಡ ನಿಗದಿತ 50 ಓವರುಗಳಲ್ಲಿ ದಂಡರೂಪದ 10 ರನ್‌ಗಳೂ ಸೇರಿ 9 ವಿಕೆಟ್‌ಗೆ 186 ರನ್ ಗಳಿಸಿತು. ಸುಪ್ರೀತ್, ಗ್ಯಾನ್ ತಲಾ 32 ರನ್‌ಗಳನ್ನು ಗಳಿಸಿದರೆ ರೋಹನ್ 23 ರನ್‌ಗಳನ್ನು ಸೇರಿಸಿದರು. ಉಡುಪಿ ತಂಡದ ನಿಶಿತ್, ಪ್ರಣವ್ ತಲಾ 2 ವಿಕೆಟ್ ಪಡೆದರು.
ಎಚ್ಚರಿಕೆಯ ಆಟದೊಂದಿಗೆ ವಿಜಯದ ಗುರಿ ಬೆನ್ನತ್ತಿದ ಉಡುಪಿ ತಂಡಕ್ಕೆ ಆಕಾಶ್ ನಾಯಕ್ 37 ಮತ್ತು ವಿಕಾಸ್ 20 ರನ್‌ಗಳ ಬ್ಯಾಟಿಂಗ್‌ನೊಂದಿಗೆ ಉತ್ತಮ ಆರಂಭ ನೀಡಿದರು. ಆದರೆ ಒಮ್ಮೆಗೆ ವಿಕೆಟ್‌ಗಳನ್ನು ಕಳೆದುಕೊಂಡ ತಂಡಕ್ಕೆ ಆಶೀಷ್ ನಾಯಕ್ ನಾಯಕನ ಜವಾಬ್ದಾರಿಯುತ ಆಟವಾಡಿ ಆರ್ಯನ್ ಜೊತೆ ಸೇರಿ 7 ಎಸೆತ ಬಾಕಿ ಇರುವಂತೆ ತಂಡವನ್ನು ವಿಜಯದ ದಡಕ್ಕೆ ತಲಪಿಸಿದರು.
ಆಶೀಷ್ ಅಜೇಯ 56 ರನ್‌ಗಳನ್ನು ಗಳಿಸಿದರೆ ಆರ್ಯನ್ 26 ರನ್ ಗಳಿಸಿದರು. ದಕ್ಷಿಣ ಕನ್ನಡ ತಂಡದ ಅಭಿಮನ್ಯು 2 ವಿಕೆಟ್ ಪಡೆದರು.