ಟಿಎಂಸಿಯಿಂದ ಬಂದವರಿಗೆ ಟಿಕೆಟ್: ಬಿಜೆಪಿ ವಿರುದ್ಧ ಕಾರ್ಯಕರ್ತರ ತೀವ್ರ ಪ್ರತಿಭಟನೆ, ಕಚೇರಿ ದ್ವಂಸ
ಕೋಲ್ಕತಾ: ಮುಂಬರುವ ಪ.ಬಂಗಾಳ ಚುನಾವಣೆಗೆ ಬಿಜೆಪಿ ಗುರುವಾರ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಿಗೇ ರಾಜ್ಯದ ವಿವಿಧೆಡೆ ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಮಾಲ್ಡಾ, ಡಮ್ ಡಮ್, ಜಲ್ ಪೈಗುರಿ, ಅಸನ್ಸೋಲ್ ನಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ತಮ್ಮಪಕ್ಷದ ಕಚೇರಿಗಳನ್ನು ದ್ವಂಸ ಮಾಡಿದ್ದಾರೆ.
ರಾಜರ್ಹತ್ ಗೋಪಾಲ್ ಪುರ ಹಾಗೂ ಡಮ್ ಡಮ್ ಅಭ್ಯರ್ಥಿಗಳ ವಿರುದ್ಧ ಬಿಜೆಪಿ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಬಿಜೆಪಿ ಬೆಂಬಲಿಗರು ಟಯರ್ ಗಳಿಗೆ ಬೆಂಕಿ ಹಚ್ಚಿ, ಬಿಜೆಪಿ ಅಭ್ಯರ್ಥಿ ಸಮಿಕ್ ಭಟ್ಟಾಚಾರ್ಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಭಟ್ಟಾಚಾರ್ಯ ರಾಜರ್ಹತ್ ಗೋಪಾಲ್ ಪುರದಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಕಾರ್ಯಕರ್ತರೆನ್ನಲಾದ ಗುಂಪು ಡಮ್ ಡಮ್ ನಲ್ಲಿರುವ ಬಿಜೆಪಿ ಕಚೇರಿಯನ್ನು ದ್ವಂಸಗೊಳಿಸಿದ್ದಾರೆ.
ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗುತ್ತಲೇ ಮಾಲ್ಡಾದಲ್ಲೂ ಪ್ರತಿಭಟನೆ ನಡೆದಿವೆ. ಹರಿಶ್ಚಂದ್ರಪುರ, ಸಹಾಪುರ ಹಾಗೂ ಮಾಣಿಕ್ ಚೌಕ್ ನ ಬಿಜೆಪಿ ಕಾರ್ಯಕರ್ತರು ತಮ್ಮದೇ ಪಕ್ಷದ ಕಚೇರಿ ಎದುರು ಟಯರ್ ಗಳನ್ನು ಸುಟ್ಟು ಹಾಕಿದರು. ಆಕ್ರೋಶಿತ ಕಾರ್ಯಕರ್ತರು ಬಿಜೆಪಿಯ ಪ್ರಮುಖ ನಾಯಕರಾದ ದಿಲಿಪ್ ಘೋಷ್ ಹಾಗೂ ಇತರರಿದ್ದ ಬ್ಯಾನರ್ ಗಳನ್ನು ಸುಟ್ಟುಹಾಕಿದರು. ಭ್ರಷ್ಟರಿಗೆ ಪಕ್ಷದ ಟಿಕೆಟ್ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಅಸನ್ಸೋಲ್ ಹಾಗೂ ದುರ್ಗಾಪುರದಲ್ಲೂ ಇದೇ ರೀತಿಯ ಪ್ರತಿಭಟನೆ ನಡೆದಿವೆ. ಬಿಜೆಪಿ ಕಾರ್ಯಕರ್ತರು ಪಾಂಡಬೇಶ್ವರ ವಿಧಾನಸಭಾ ಕ್ಷೇತ್ರದಿಂದ ಟಿಎಂಸಿಯಿಂದ ಪಕ್ಷಾಂತರವಾಗಿರುವ ಜಿತೇಂದ್ರ ತಿವಾರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ನಾವು ತಿವಾರಿ ಪರ ಪ್ರಚಾರ ನೆಡೆಸುವುದಿಲ್ಲ.ಬಿಜೆಪಿ ವಿರುದ್ಧ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಹೇಳಿದ್ದಾರೆ.
ರಾಣಿಗಂಜ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜಾನ್ ಮುಖರ್ಜಿ, ದುರ್ಗಾಪುರ ಪೂರ್ವದ ಅಭ್ಯರ್ಥಿ ದೀಪೇಂಶು ಚೌಧರಿ ವಿರುದ್ದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
ಉತ್ತರ 24 ಪರಗಣ ಜಿಲ್ಲೆಯ ಶ್ಯಾಮ್ ನಗರದ ಬಿಜೆಪಿ ಕಾರ್ಯಕರ್ತರು ಪಕ್ಷದ ಅಭ್ಯರ್ಥಿ ಜಗದಾಲ್ ರನ್ನು ವಿರೋಧಿಸಿ ಪಕ್ಷದ ಕಚೇರಿಯನ್ನು ನಾಶಗೊಳಿಸಿದರು. ಈ ಕ್ಷೇತ್ರದಲ್ಲಿ ಟಿಎಂಸಿಯಿಂದ ಬಿಜೆಪಿಗೆ ಸೇರಿರುವ ಅರಿಂದಮ್ ಭಟ್ಟಾಚಾರ್ಯಗೆ ಟಿಕೆಟ್ ನೀಡಲಾಗಿದೆ.
ಸೋಮವಾರದಿಂದ ಬಿಜೆಪಿ ಪಕ್ಷದ ಕಾರ್ಯಕರ್ತರು ಹೂಗ್ಲಿ, ಹೌರಾ, ದಕ್ಷಿಣ 24 ಪರಗಣ ಸಹಿತ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕೋಲ್ಕತಾದ ಪಕ್ಷದ ಚುನಾವಣಾ ಕಚೇರಿಯ ಎದುರು ಭಾರೀ ಪ್ರತಿಭಟನೆಯನ್ನು ಆಯೋಜಿಸಿದ್ದರು. ಕಚೇರಿಯ ಎದುರು ಧರಣಿ ನಡೆಸಿದ್ದ ಕಾರ್ಯಕರ್ತರು ಟಿಎಂಸಿಯಿಂದ ಪಕ್ಷಾಂತರವಾದವರಿಗೆ ಟಿಕೆಟ್ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
.