ಮಾ. 22-28: ಸುಮನಸಾ ಕೊಡವೂರು ನಾಟಕೋತ್ಸವ ರಂಗಹಬ್ಬ
ಉಡುಪಿ, ಮಾ.19: ಸುಮನಸಾ ಕೊಡವೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಉಡುಪಿ ನಗರಸಭೆ, ಸಂಸ್ಕೃತಿ ನಿರ್ದೇಶನಾಲಯ ನವ ದೆಹಲಿ, ಪೇಜಾವರ ಅಧೋಕ್ಷಜ ಮಠ ಇವುಗಳ ಸಹಯೋಗದೊಂದಿಗೆ ರಂಗಹಬ್ಬ-9 ನಾಟಕೋತ್ಸವನ್ನು ಮಾ.22ರಿಂದ 28ರವರೆಗೆ ಸಂಜೆ 6.30ಕ್ಕೆ ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುಮನಸಾದ ಗೌರವಾಧ್ಯಕ್ಷ ಎಂ.ಎಸ್.ಭಟ್, ಮಾ.22ರಂದು ರಂಗಹಬ್ಬವನ್ನು ಕಲಾ ಪೋಷಕ ಆನಂದ ಸಿ.ಕುಂದರ್ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಶಾಸಕ ಕೆ. ರಘುಪತಿ ಭಟ್ ವಹಿಸಲಿರುವರು. ಮಾ.28ರಂದು ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಲಿರುವರು ಎಂದರು.
ಪ್ರತಿದಿನ ರಂಗಸಾಧಕರಿಗೆ ಸನ್ಮಾನಿಸಲಾಗುವುದು. ಸಮಾರೋಪ ಸಮಾರಂಭ ದಲ್ಲಿ ಯು.ದುಗ್ಗಪ್ಪನೆನಪಿನಲ್ಲಿ ಯಕ್ಷ ಸುಮ ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿರ್ತಿ ಬಾಲಕೃಷ್ಣ ಗಾಣಿಗ ಅವರಿಗೆ ನೀಡಲಾಗುವುದು. ಮಾ.27ರಂದು ಸಂಜೆ 2ರಿಂದ 5 ಗಂಟೆವರೆಗೆ ಕಾಲೇಜು ವಿದ್ಯಾರ್ಥಿ ಗಳಿಗೆ ಕಿರು ಪ್ರಹಸನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಮಾ.26ರ ಸಮಾರಂಭದಲ್ಲಿ ಪರ್ತಕರ್ತ ಬಾಲಕೃಷ್ಣ ಶಿಬಾರ್ಲ ಅವರ ಕಾಪ ತುಳು ನಾಟಕ ಕೃತಿಯನ್ನು ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಬಿಡುಗಡೆಗೊಳಿ ಸಲಿರುವರು ಎಂದು ಅವರು ತಿಳಿಸಿದರು.
ಮಾ.22ರಂದು ಪಟ್ಲ ಭೂಮಿಗೀತ ಸಾಂಸ್ಕೃತಿಕ ವೇದಿಕೆಯಿಂದ ‘ಗೆಲಿಲಿಯೊ’, 23ರಂದು ಸುಮನಸಾ ಕೊಡವೂರು ತಂಡದಿಂದ ‘ನೆರಳಿಲ್ಲದ ಮನುಷ್ಯರು’, 24ರಂದು ದಿವ್ಯರಂಗ ಬೆಂಗಳೂರು ತಂಡದಿಂದ ‘ಮಾಯಾ ಮೋಹಜಾಲ’, ಮಾ. 25ರಂದು ಸುಮನಸಾ ಕೊಡವೂರು ತಂಡ ದಿಂದ ‘ರಾಮ ಭಕ್ತ ಜಾಂಬವಂತ’, ಮಾ. 26ರಂದು ಭೂಮಿಕಾ ಹಾರಾಡಿ ತಂಡದಿಂದ ‘ನಮ್ಮ ನಿಮ್ಮೊಳಗೊಬ್ಬ’, 27ರಂದು ಸುಮನಸಾ ಕೊಡವೂರು ತಂಡದಿಂದ ‘ಕರುಳ ತೆಪ್ಪದ ಮೇಲೆ’ ಕನ್ನಡ ನಾಟಕಗಳು ಮತ್ತು ಮಾ.28ರಂದು ಸನ್ನಿಧಿ ಕಲಾವಿದರು ತಂಡದಿಂದ ‘ಮಾಯೊದ ಬೊಲ್ಪು’ ತುಳುನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಜೊತೆ ಕಾರ್ಯ ದರ್ಶಿ ಪ್ರಜ್ಞಾ, ಕೋಶಾಧಿಕಾರಿ ಚಂದ್ರಕಾಂತ್ ಕುಂದರ್, ಭಾಸ್ಕರ್ ಪಾಲನ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.