ಜನಸಾಮಾನ್ಯರಿಗೆ ರಕ್ಷಣಾ ಕಾರ್ಯದ ಅರಿವು ಅಗತ್ಯ: ಮದನ್ ಮೋಹನ್
ಮಂಗಳೂರು, ಮಾ.19: ರಾಸಾಯನಿಕ ದುರಂತದ ತುರ್ತು ಸಂದರ್ಭದಲ್ಲಿ ಜನಸಾಮಾನ್ಯರು ತಮ್ಮ ರಕ್ಷಣೆಯ ಕಾರ್ಯದ ಬಗ್ಗೆ ಅರಿವು ಹೊಂದುವುದು ಅಗತ್ಯ ಎಂದು ಸಹಾಯಕ ಆಯುಕ್ತ ಮದನ್ ಮೋಹನ್ ಸಿ. ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಸಾಯನಿಕ ದುರಂತದ ಅಣುಕು ಪ್ರದರ್ಶನದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಎನ್‌ಡಿಆರ್‌ಎಫ್ ಸಿಬ್ಬಂದಿಯಿಂದ ಜಿಲ್ಲೆಯ ಬಾಳಾ ಗ್ರಾಮದ ಬಿಎಎಸ್‌ಎಫ್ ರಾಸಾಯನಿಕ ಕಾರ್ಖಾನೆಯ ವ್ಯಾಪ್ತಿಯ ಸಾರ್ವಜನಿಕರಿಗೆ ರಾಸಾಯನಿಕ ದುರಂತದಿಂದ ಆಗುವ ಅಪಾಯವನ್ನು ತಡೆಗಟ್ಟುವ ಬಗ್ಗೆ ಅಣುಕು ಪ್ರದರ್ಶನವನ್ನು ಮಾ.20ರಂದು ಹಮ್ಮಿಕೊಳ್ಳಲಾಗುವುದು ಎಂದರು.
ರಾಸಾಯನಿಕ ಸೋರುವಿಕೆಯಿಂದಾಗುವ ಅನಾಹುತಗಳನ್ನು ಪರಿಣಿತರು ಮಾತ್ರವಲ್ಲದೆ ಜನಸಾಮಾನ್ಯರು ಆ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬಹುದು ಎಂಬ ಸಾಂದರ್ಭಿಕ ಅಣುಕು ಪ್ರದರ್ಶವು ಎಲ್ಲರಿಗೂ ಉಪಯೋಗವಾಗಲಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದರು.
ಇಂತಹ ಅನಾಹುತಗಳು ಸಂಭವಿಸಿದಾಗ ಮೊದಲು ಯಾವೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸ್ವರಕ್ಷಣೆ ಹಾಗೂ ಇತರರನ್ನು ರಕ್ಷಿಸುವ ಪರಿಯನ್ನು ಮನನ ಮಾಡಲು ಇದು ಸಹಕಾರಿಯಾಗಲಿದೆ ಎಂದು ಹೇಳಿದರು. ಗ್ರಾಮ ಪಂಚಾಯತ್ ಪಿಡಿಒಗಳು ರಾಸಾಯನಿಕ ಅಣುಕು ಪ್ರದರ್ಶನದ ಬಗ್ಗೆ ಜನರಿಗೆ ಅರಿವು ಮೂಡಿಸಿ, ಅಪಾಯದ ತೀವ್ರತೆಯನ್ನು ಮನದಟ್ಟು ಮಾಡಿಕೊಳ್ಳುವಂತೆ ಶ್ರಮಿಸಬೇಕು. ಅಣುಕು ಪ್ರದರ್ಶನದಲ್ಲಿ ಜಿಲ್ಲಾಡಳಿತ, ಪೊಲೀಸ್, ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಗಳು ಸಹಕರಿಸಬೇಕು.
ಸಭೆಯಲ್ಲಿ ಕಾರ್ಖಾನೆ ಮತ್ತು ಬಾಯ್ಲರ್‌ನ ಉಪನಿರ್ದೇಶಕ ರಾಜೇಶ್ ಮಿಶ್ರಿ ಕೋಟಿ, ಸಹಾಯಕ ಕಮಾಂಡೆಂಟ್ ಸೆಂಥಿಲ್ ಕುಮಾರ್, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯ್‌ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.