ಮುರುಡೇಶ್ವರದಲ್ಲಿ ಕೊವಿಡ್-19 ಚೆಕ್ ಪೋಸ್ಟ್
ಭಟ್ಕಳ : ರಾಜ್ಯ ಸರಕಾರ ಕೇರಳ ಮತ್ತು ಮಹರಾಷ್ಟ್ರಗಳಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗಟಿವ್ ಪರೀಕ್ಷಾ ವರದಿ ತರುವುದನ್ನು ಕಡ್ಡಾಯ ಗೊಳಿಸಿರುವ ಹಿನ್ನೆಲೆಯಲ್ಲಿ ಉ.ಕ ಜಿಲ್ಲೆಯಲ್ಲೋ ಹಲವು ಕಡೆಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿದ್ದು ಭಟ್ಕಳ ತಾಲೂಕಿನ ಪ್ರವಾಸಿ ತಾಣವಾಗಿರುವ ಮುರುಡೇಶ್ವರದಲ್ಲಿ ಕೊವಿಡ್-19 ಚೆಕ್ ಪೋಸ್ಟ್ ನಿರ್ಮಿಸಿ ಹೊರಾರಾಜ್ಯಗಳಿಂದ ಬರುವ ಪ್ರವಾಸಿಗರ ಮೇಲೆ ಕಟ್ಟೆಚ್ಚರ ವಹಿಸಲಾಗಿದೆ.
ಮುರುಡೇಶ್ವರ ಪ್ರವೇಶ ದ್ವಾರದಲ್ಲಿ ಆರೋಗ್ಯ ಹಾಗೂ ಕಂದಾಯ ಇಲಾಖೆಯ ವತಿಯಿಂದ ಚೆಕ್ಪೋಸ್ಟ್ ಸ್ಥಾಪಿಸಿದ್ದು, ಕೇರಳ ಹಾಗೂ ಮಹಾರಾಷ್ಟ್ರದಿಂದ ಮುರುಡೇಶ್ವರಕ್ಕೆ ಬಂದವರು ಕಡ್ಡಾಯವಾಗಿ ಕೊರೋನ ನೆಗೆಟಿವ್ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕಾಗಿದ್ದು, ಇಲ್ಲದಿದ್ದಲ್ಲಿ ಕೊರೋನ ಪರೀಕ್ಷೆಗೆ ಒಳಪಡಿಸುವಂತೆ ಕಟ್ಟಪ್ಪಣೆ ಹೊರಡಿಸಲಾಗಿದೆ. ಅಲ್ಲದೇ ಕೇರಳ ಹಾಗೂ ಮಹಾರಾಷ್ಟದಿಂದ ಬಂದು ವಸತಿ ಗೃಹದಲ್ಲಿ ತಂಗಿದವರ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸಾರ್ವಜನಿಕರು ಕೊರೋನ ತಡೆಯುವ ನಿಟ್ಟಿನಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕ್ ಧರಿಸದವರಿಗೆ ಮುರುಡೇಶ್ವರ ದೇವಸ್ಥಾನ ಪ್ರವೇಶ ನಿರ್ಬಂಧಿಸುವ ಬಗ್ಗೆಯೂ ದೇವಸ್ಥಾನದ ಆಡಳಿತ ಮಂಡಳಿ ಚಿಂತನೆ ನಡೆಸುತ್ತಿರುವ ಬಗ್ಗೆ ಮಾಹಿತಿ ಲಭಿಸಿದೆ.
ಮೂವರಿಗೆ ಕೊರೋನ ಪಾಸಿಟಿವ್
ಭಟ್ಕಳದಲ್ಲಿ ಮೂವರಿಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ದುಬೈನಿಂದ ವಾಪಸ್ಸಾದ ಇಲ್ಲಿನ ಉಸ್ಮಾನ್ ನಗರದ 23 ವಯಸ್ಸಿನ ಯುವತಿ, ದುಬೈ ಪ್ರಯಾಣಕ್ಕೆ ಮುಂದಾಗಿದ್ದ 47 ವಯಸ್ಸಿನ ವ್ಯಕ್ತಿ ಹಾಗೂ ಮಂಗಳೂರು ವಿದ್ಯಾರ್ಥಿ ನಿಲಯದಲ್ಲಿದ್ದುಕೊಂಡು ಓದು ಮುಂದುವರೆಸಿದ್ದ ಇಲ್ಲಿ ಕೊಪ್ಪ ಗ್ರಾಮ ಪಂಚಾಯತನ ಯುವತಿಯೋರ್ವಳಿಗೆ ಕೊರೋನ ಪಾಸಿಟಿವ್ ಇರುವುದು ಖಚಿತವಾಗಿದೆ.
ಎಲ್ಲ ಮೂವರನ್ನು ಹೋಮ್ ಕ್ವಾರೆಂಟೈನ್ನಲ್ಲಿರಿಸಲಾಗಿದ್ದು, ಪ್ರಾಥಮಿಕ ಸಂಪರ್ಕದ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ವಿದೇಶದಿಂದ ಬಂದ ಇಬ್ಬರ ವರದಿ ಇನ್ನಷ್ಟೇ ಬರಬೇಕಾಗಿದ್ದು, ಕೊರೋನ ಸೋಂಕು ಹರಡದಂತೆ ಸರ್ವ ರೀತಿಯಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.