×
Ad

ಮನಪಾ ಮೇಯರ್ ಕಚೇರಿ ಸಾರ್ವಜನಿಕರ ಭೇಟಿಗೆ ಮುಕ್ತವಾಗಿರಲಿ: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ

Update: 2021-03-20 14:20 IST

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕಚೇರಿ ಸಾರ್ವಜನಿಕರ ಪಾಲಿಗೆ ಇನ್ನೂ ಮುಕ್ತ ಅವಕಾಶವಲ್ಲದ ರೀತಿಯಲ್ಲಿ ಆಡಳಿತ ಸದಸ್ಯರು ಮತ್ತು ಕಾರ್ಯಕರ್ತರಿಗೆ ಸೀಮಿತವಾದ ನೆಲೆಯಲ್ಲಿರುವುದು ಬಹಳ ವಿಷಾದನೀಯವಾಗಿದೆಯೆಂದು ವೆಲ್ಫೇರ್  ಪಾರ್ಟಿ ಆಫ್ ಇಂಡಿಯಾ ಇದರ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಮ್. ಮುತ್ತಲಿಬ್ ಪ್ರಕಟಣೆಯಲ್ಲಿ ಹೇಳಿದರು.

ಇಲ್ಲಿ ಯಾವುದೇ ಪಕ್ಷಗಳ ಬಗ್ಗೆ ದೋಷಾರೋಪ ಹೊರಿಸುವ ನಿಟ್ಟಿನಲ್ಲಿ ಇದನ್ನು ಹೇಳುತ್ತಿಲ್ಲ ಬದಲಾಗಿ ಮಂಗಳೂರು ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ಇದು ತುಂಬಾ ಹಿಂದಿನಿಂದಲೇ ಸಾಗಿ ಬಂದ ಜಾಯಮಾನವಾಗಿದೆ ಎಂದ ಅವರು, ಇಲ್ಲಿ ಕಾಂಗ್ರೆಸ್ ಪಕ್ಷದ ಆಡಳಿತ ಜಾರಿಯಲ್ಲಿರುವಾಗ ಮೇಯರ್ ಕಚೇರಿಗೆ ಹೋದರೆ ಅದು ಪಕ್ಷದ ಕಚೇರಿಯೋ ಎಂಬಂತೆ ಭಾಸವಾಗುವಷ್ಟು ಆ, ಪಕ್ಷದ ಕಾರ್ಯಕರ್ತರು ಮತ್ತು ಅಲ್ಲಿನ ನಾಯಕರ ಚೇಲಾಗಳಿಂದ ತುಂಬಿಕೊಂಡಿದ್ದರೆ, ಇದೀಗ ಸಂಘ, ಶಿಸ್ತು ಎಂಬ ಬಡಾಯಿ ಬಿಡುವ ಭಾಜಪ ಸರದಿ ಬಂದಾಗಲೂ, ಇದರಲ್ಲಿ ಯಾವುದೇ ಬದಲಾವಣೆ ಕಾಣಲಾಗದು. ಈಗಾಗಲೇ ಮೇಯರ್ ಕಚೇರಿ ಭಾಜಪ ಮತ್ತು ಅವರ ಅನೇಕ ಅಂಗಸಂಸ್ಥೆಗಳು ನಡೆಸುವ ಶಾಖೆಯೋ ಎಂಬಂತೆ ಜನಸಾಮಾನ್ಯರಿಗೆ ಜನಪ್ರತಿನಿಧಿಗಳು ಲಭ್ಯವಲ್ಲದ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದ ಅವರು, ಇನ್ನು ಪಾಲಿಕೆ ಕಚೇರಿ ಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಸೇರುವ ಸಮಾವೇಶ ಮಾಡಲೇ ಬೇಕೆಂದಾದಲ್ಲಿ ಅದಕ್ಕೆ ವಾರದ ಒಂದೆರಡು ದಿನದಲ್ಲಿ ಒಂದಿಷ್ಟು ನಿಗದಿತ ಸಮಯ ಗೊತ್ತು ಮಾಡಿ ಉಳಿದ ಸಮಯಗಳನ್ನು ಸಾರ್ವಜನಿಕರಿಗೆ ಮುಕ್ತವಾಗಿಸಲಿ ಎಂದರಲ್ಲದೆ, ಇವರೆಲ್ಲರೂ ಸದಸ್ಯರಾಗಿಯೂ, ಮುಖ್ಯಸ್ಥರಾಗಿಯೂ ತಮ್ಮ ಹುದ್ದೆಯನ್ನು ಅಲಂಕರಿಸಿಕೊಂಡ ನಂತರವಾದರೂ ತಾವು ಸರ್ವರಿಗಾಗಿರುವ ಜನಪ್ರತಿನಿಧಿಗಳು ಹಾಗೂ ಎಲ್ಲರ ಭೇಟಿಗೆ ಲಭ್ಯವಿದ್ದು ಅವರೆಲ್ಲರ ಅಹವಾಲುಗಳನ್ನು ಆಲಿಸಲು ಮಾತ್ರವಲ್ಲದೆ ಪರಿಹರಿಸಲು ಬದ್ಧರಾಗಿರಬೇಕಾದವರು ಎಂಬಷ್ಟು ಪ್ರಜಾಪ್ರಭುತ್ವದ ಪ್ರಜ್ಞೆಯನ್ನಾದರೂ ಹೊಂದದಿರುವುದಕ್ಕೆ ಎಸ್. ಎಮ್. ಮುತ್ತಲಿಬ್ ಖೇದ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News