ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೂಲಸೌಕರ್ಯ ಸೌಲಭ್ಯಗಳ ಉದ್ಘಾಟನೆ
ಮಂಗಳೂರು : ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ (ಎಸ್‍ಜೆಇಸಿ) ಹೊಸ ಮೂಲಸೌಕರ್ಯ ಸೌಲಭ್ಯಗಳನ್ನು ಮಂಗಳೂರಿನ ಬಿಷಪ್ ಮತ್ತು ಕಾಲೇಜಿನ ಅಧ್ಯಕ್ಷರಾದ ಅತಿ ವಂ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಆಶೀರ್ವದಿಸಿ ಉದ್ಘಾಟಿಸಿದರು.
ಲೇಡೀಸ್ ಹಾಸ್ಟೆಲ್‍ನಲ್ಲಿನ ಎಸಿ ಬ್ಲಾಕ್, ತರಬೇತಿ ಮತ್ತು ಉದ್ಯೋಗ ವಿಭಾಗ, ಆ್ಯಂಫಿಥಿಯೇಟರ್-ಜೋಸರೆನಾ, ಅಗ್ನಿ ಸುರಕ್ಷತಾ ವ್ಯವಸ್ಥೆ ಮತ್ತು ಲಿಫ್ಟ್ ಗಳು, 300 ಕಿ.ವ್ಯಾಟ್ ಮೇಲ್ಚಾವಣಿ ಸೌರ ಫಲಕಗಳು ಮತ್ತು ಕಲಾಂ ಸಭಾಂಗಣ ಇವುಗಳನ್ನು ಈ ಸಂದರ್ಭದಲ್ಲಿ ಆಶೀರ್ವದಿಸಿ ಉದ್ಘಾಟಿಸಲಾಯಿತು.
ಸುಮಾರು 60 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವ ಸಾಮರ್ಥ್ಯದೊಂದಿಗೆ ಲೇಡೀಸ್ ಹಾಸ್ಟೆಲ್‍ನಲ್ಲಿ ಹೊಸದಾಗಿ ನಿರ್ಮಿಸಲಾದ ಎಸಿ ಬ್ಲಾಕ್ ಕ್ಯಾಂಪಸ್‍ನಲ್ಲಿರುವ ಹಾಸ್ಟೆಲ್ ಸೌಲಭ್ಯದ ಮೌಲ್ಯವನ್ನು ಹೆಚ್ಚಿಸಿದೆ. ವಿಶಾಲವಾದ ಕೊಠಡಿಗಳು ಮತ್ತು ಆಧುನಿಕ ಮೂಲಸೌಕರ್ಯಗಳು ವಿದ್ಯಾರ್ಥಿ ಗಳ ಕಲಿಕೆಯ ಅಗತ್ಯತೆಗಳನ್ನು ಬೆಳೆಸುವ ಉದ್ದೇಶವನ್ನು ಹೊಂದಿವೆ.
ಹೊಸ ಸೌಲಭ್ಯಗಳ ಸೇರ್ಪಡೆ ತರಬೇತಿ ಮತ್ತು ಉದ್ಯೋಗ ವಿಭಾಗಕ್ಕೆ ಕಾರ್ಪೋರೇಟ್ ನೋಟವನ್ನು ನೀಡಿದೆ. ಆಧುನಿಕ ದೃಷ್ಟಿಕೋನ ಮತ್ತು ಅಗತ್ಯ ಸೌಕರ್ಯಗಳನ್ನು ಹೊಂದಿರುವ ಈ ಮೂಲಸೌಕರ್ಯವು ಕ್ಯಾಂಪಸ್ ನೇಮಕಾತಿ ಪ್ರಕ್ರಿಯೆಯ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡುವ ಉದ್ದೇಶವನ್ನು ಹೊಂದಿದೆ. ಆ್ಯಂಫಿಥಿಯೇಟರ್ ಜೋಸರೆನಾವನ್ನು ರಾಷ್ಟ್ರೀಯ ಶಿಕ್ಷಣ ನೀತಿ 2020ಗೆ ಅನುಗುಣವಾಗಿ ನಿರ್ಮಿಸ ಲಾಗಿದ್ದು, ಇದು ವಿದ್ಯಾರ್ಥಿಗಳ ಸಾಂಸ್ಕೃತಿಕ, ಕಲಾತ್ಮಕ ಮತ್ತು ಸಾಹಿತ್ಯಿಕ ಪ್ರತಿಭೆಗಳನ್ನು ಪೋಷಿಸಲು ವಿಶೇಷ ಪ್ರಚೋದನೆಯನ್ನು ನೀಡು ತ್ತದೆ. ಮಂಗಳೂರಿನಲ್ಲಿ ಕೆಲವೇ ಸ್ಥಳಗಲ್ಲಿರುವ ಈ ರೀತಿಯ ಸೌಲಭ್ಯವು ವಿದ್ಯಾರ್ಥಿಗಳಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ಯನ್ನು ತೋರಿಸಲು ಮತ್ತು ಅಭಿವೃದ್ಧಿಪಡಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.
ಕಡ್ಡಾಯ ಅವಶ್ಯಕತೆಗಳ ಪ್ರಕಾರ ಕ್ಯಾಂಪಸ್‍ನ 4 ಸ್ಥಳಗಳಲ್ಲಿ ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಸ್ಥಾಪಿಸಲಾಗಿದ್ದು ಅದು ಅಗ್ನಿ ಅಪಾಯಗಳನ್ನು ಮೇಲ್ವಿಚಾರಣೆ ಮಾಡಲು, ಪತ್ತೆ ಹಚ್ಚಲು ಮತ್ತು ನಿಗ್ರಹಿಸಲು ಸಹಕಾರಿಯಾಗಿದೆ. ಸ್ವಚ್ಛ ಮತ್ತು ಹಸಿರು ಕ್ಯಾಂಪಸ್ ನಿರ್ಮಿಸುವಲ್ಲಿ ಕಾಲೇಜು ಬಹಳ ಕಾರ್ಯಪ್ರವೃತ್ತವಾಗಿದ್ದು ಮೇಲ್ಚಾವಣಿ ಸೌರ ಫಲಕಗಳ ಯೋಜನೆಯು ಈ ಗುರಿಯನ್ನು ಸಾಧಿಸಲು ಸಂಸ್ಥೆಯು ಕೈಗೊಂಡ ಪ್ರಮುಖ ಹೆಜ್ಜೆಯಾಗಿದೆ. ಹೊಸದಾಗಿ ಸ್ಥಾಪಿಸಲಾದ ಆನ್-ಗ್ರಿಡ್ ಸೌರ ಮೇಲ್ಚಾವಣಿ ವ್ಯವಸ್ಥೆಯು ಬ್ಯಾಟರಿರಹಿತವಾಗಿದ್ದು ಅದು ಸಾರ್ವಜನಿಕ ವಿದ್ಯುತ್ ಗ್ರಿಡ್‍ಗೆ ಸಂಪರ್ಕ ಹೊಂದಿದೆ. ಒಟ್ಟು 1.3 ಕೋಟಿ ರೂ.ಗಳ ವೆಚ್ಚದಲ್ಲಿ, ಕಾಲೇಜು ಈಗ 300ಕಿ.ವ್ಯಾಟ್ ಸಾಮರ್ಥ್ಯದ ಸೌರ ಮೇಲ್ಚಾವಣಿಯನ್ನು ಕ್ಯಾಂಪಸ್‍ನಲ್ಲಿ ಸ್ಥಾಪಿಸಿದ್ದು ಇದು ಕಾಲೇಜಿನ ಪರಿಸರ ಸ್ನೇಹಪರತೆಯನ್ನು ಹೆಚ್ಚಿಸಲಿದೆ.
ಕೇಂದ್ರೀಯ ಹವಾನಿಯಂತ್ರಣ ಸೌಲಭ್ಯ ಮತ್ತು 600 ಆಸನ ಸಾಮರ್ಥ್ಯ ಹೊಂದಿರುವ ನವೀಕರಿಸಿದ 10,000 ಚದರ ಅಡಿ ಕಲಾಂ ಸಭಾಂ ಗಣವು ಟೆಕ್ ಫೆಸ್ಟ್, ಟೆಡ್ ಎಕ್ಸ್ ಮತ್ತು ಕಾಲೇಜು ಆಯೋಜಿಸುವ ಹಲವು ಮಹತ್ತರ ಕಾರ್ಯಕ್ರಮಗಳಿಗೆ ವೇದಿಕೆಯಾಗಲಿದೆ. ಸೌಲಭ್ಯಗಳ ಉದ್ಘಾಟನೆಯ ಬಳಿಕ ಈ ಅಭಿವೃದ್ಧಿ ಯೋಜನೆಗಳಲ್ಲಿ ಭಾಗಿಯಾಗಿರುವ ಹಲವಾರು ವ್ಯಕ್ತಿಗಳ ಕೊಡುಗೆಗಳನ್ನು ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ, ಕಾಲೇಜಿನ ನಿರ್ದೇಶಕರಾದ ವಂ ವಿಲ್ಫ್ರೆಡ್ ಪ್ರಕಾಶ್ ಡಿ'ಸೋಜಾ ಅವರು ಮಂಗಳೂರಿನ ಬಿಷಪ್ ಮತ್ತು ಎಸ್‍ಜೆಇಸಿ ಅಧ್ಯಕ್ಷರಾದ ಅತಿ ವಂ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಗೆ ನ್ಯಾಕ್ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. ಕಾಲೇಜಿಗೆ ಇತ್ತೀಚೆಗೆ ಐದು ವರ್ಷಗಳ ಕಾಲ ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ (ನ್ಯಾಕ್) ಪ್ರತಿಷ್ಠಿತ ಎ + ದರ್ಜೆಯನ್ನು ನೀಡಿತ್ತು. 4 ಪಾಯಿಂಟ್ ಸ್ಕೇಲ್‍ನಲ್ಲಿ 3.39 ರ ಸಂಚಿತ ಗ್ರೇಡ್ ಪಾಯಿಂಟ್ ಸರಾಸರಿಯೊಂದಿಗೆ (ಸಿಜಿಪಿಎ), ಎಸ್‍ಜೆಇಸಿ ತನ್ನ ಮೊದಲ ಚಕ್ರದಲ್ಲಿ ನ್ಯಾಕ್ ನಿಂದ ಎ + ಗ್ರೇಡ್‍ನೊಂದಿಗೆ ಮಾನ್ಯತೆ ಪಡೆದ ಕಾಲೇಜುಗಳ ಪಟ್ಟಿಗೆ ಸೇರಿತ್ತು.
ತಮ್ಮ ಭಾಷಣದಲ್ಲಿ, ಅತಿ ವಂ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಒಲಿಂಪಿಕ್ಸ್‍ನ ಧ್ಯೇಯವಾಕ್ಯವನ್ನು ಉಲ್ಲೇಖಿಸಿ ದೈನಂದಿನ ಜೀವನ ದಲ್ಲಿ ವೇಗ, ಉನ್ನತಿ ಮತ್ತು ಬಲ ಈ ಗುಣಲಕ್ಷಣಗಳನ್ನು ಬೆಳೆಸುವಂತೆ ಎಲ್ಲರಿಗೂ ಕರೆ ನೀಡಿದರು. ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಭಾರತದ ಪ್ರಮುಖ ಪಾಲು ಇದೆ ಮತ್ತು ಎಸ್‍ಜೆಇಸಿ ಪ್ರಾರಂಭದಿಂದಲೂ ಅದರತ್ತ ಕೊಡುಗೆ ನೀಡುತ್ತಿದೆ ಎಂದು ಅವರು ಉಲ್ಲೇಖಿಸಿದರು. ರೂಪಾಂತರದ ಮೂಲಕ ವಿದ್ಯಾರ್ಥಿಗಳ ಸಾಮಥ್ರ್ಯವನ್ನು ಹೆಚ್ಚಿಸಲು ಕಾಲೇಜು ಶ್ರಮಿಸುತ್ತಿದೆ ಎಂದು ಅವರು ಹೇಳಿದರು. ಸಂಶೋಧನೆ ಮತ್ತು ನಾವೀನ್ಯತೆ ಈಗಿನ ಅವಶ್ಯಕತೆಯಾಗಿದ್ದು ಕಾಲೇಜು ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ ಎಂದು ಮಂಗಳೂರಿನ ಬಿಷಪ್ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಹ ನಿರ್ದೇಶಕರುಗಳಾದ ವಂ ರೋಹಿತ್ ಡಿ'ಕೋಸ್ತಾ ಹಾಗೂ ವಂ ಆಲ್ವಿನ್ ರಿಚರ್ಡ್ ಡಿ'ಸೋಜಾ, ಪ್ರಾಂಶು ಪಾಲರಾದ ಡಾ ರಿಯೊ ಡಿ'ಸೋಜಾ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಗಳ ನಿರ್ದೇಶಕ ವಂ ರಿಚರ್ಡ್ ಕುವೆಲ್ಲೋ, ಕಾಲೇಜಿನ ಮಾನವ ಸಂಪನ್ಮೂಲ ಅಧಿಕಾರಿ ಶ್ರೀ ರಾಕೇಶ್ ಲೋಬೊ, ಕಾರ್ಯಕ್ರಮದ ಸಂಯೋಜಕ ಡಾ. ಬಿನು ಕೆ.ಜಿ, ಪ್ರೊ ಲೈನಲ್ ಅರಾನ್ಹಾ ಅವರು ಉಪಸ್ಥಿತರಿದ್ದರು.