ಯಾಂತ್ರೀಕೃತ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪ್ರಮಾಣ ಪತ್ರ ಪಡೆಯಲು ಮತ್ತೊಂದು ಅವಕಾಶ
ಉಡುಪಿ, ಮಾ.20: ಜಿಲ್ಲೆಯಲ್ಲಿ ಯಾಂತ್ರೀಕೃತ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪ್ರಮಾಣ ಪತ್ರ ಪಡೆಯಲು ಮೀನುಗಾರಿಕಾ ಇಲಾಖೆಗೆ ಅರ್ಜಿ ಸಲ್ಲಿಸಿ, ಈವರೆಗೆ ಪ್ರಮಾಣ ಪತ್ರ ಪಡೆಯದ ಅರ್ಜಿದಾರರಿಗೆ ಇಲಾಖೆ ಮತ್ತೊಮ್ಮೆ ಅವಕಾಶ ಕಲ್ಪಿಸಿದೆ.
2016ರ ನ.21ರೊಳಗೆ ಇಲಾಖೆಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರು ನಿಯಮಾನುಸಾರ ಸಂಬಂಧಿತ ವಿಧಾನಸಭಾ ಕ್ಷೇತ್ರದ ಶಾಸಕರ ಶಿಪಾರಸ್ಸು ಪತ್ರ ಹಾಗೂ 10,000 ರೂ. ಗಳ ನಗದು ಡಿ.ಡಿ ಯೊಂದಿಗೆ ಸಂಬಂಧ ಪಟ್ಟ ಇಲಾಖಾ ಕಚೇರಿಯನ್ನು ಸಂಪರ್ಕಿಸುವಂತೆ ತಿಳಿಸಲಾಗಿದೆ.
ಇದೇ ಮಾರ್ಚ್ 31ರೊಳಗೆ ಸಲ್ಲಿಸಲಾದ ಅರ್ಜಿಗಳ ಬಗ್ಗೆ ಜಿಲ್ಲಾ ಮಟ್ಟದ ಸಾಧ್ಯತಾ ಪತ್ರ ಸಮಿತಿ ಸಬೆ ಕರೆದು ಸಾಧ್ಯತಾ ಪ್ರಮಾಣ ಪತ್ರ ನೀಡುವ ಬಗ್ಗೆ ನಿರ್ಣಯ ತೆಗೆದು ಕೊಳ್ಳಲಾಗುವುದು ಎಂದು ಉಡುಪಿ ಮೀನುಗಾರಿಕೆ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವಧಿ ವಿಸ್ತರಣೆ: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ನಿರ್ಮಾಣಕ್ಕೆ ಸಾಧ್ಯತಾ ಪ್ರಮಾಣ ಪತ್ರ ಪಡೆದು 2 ವರ್ಷದೊಳಗೆ ದೋಣಿ ನಿರ್ಮಿಸದೆ ಪುನಃ ಕಾಲಾವಕಾಶ ಕೋರಿ ಅರ್ಜಿಗಳು ಬಂದಿರುವ ಹಿನ್ನೆಲೆಯಲ್ಲಿ ಸರಕಾರದ ಆದೇಶದಂತೆ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಅವಕಾಶ ಕಲ್ಪಿಸಲಾಗಿದೆ.
ಇದರಂತೆ ದೋಣಿ ನಿರ್ಮಾಣದ ಸಾಧ್ಯತಾ ಪತ್ರದ ಅವಧಿ ವಿಸ್ತರಣೆಗೆ ಇಚ್ಛಿಸುವ ಅರ್ಜಿದಾರರು ಅರ್ಜಿಯನ್ನು ಸಂಪೂರ್ಣ ದಾಖಲಾತಿ ಗಳೊಂದಿಗೆ ಸಂಬಂಧಿಸಿದ ಮೀನುಗಾರಿಕೆ ಇಲಾಖಾ ಕಛೇರಿಗೆ ಸಲ್ಲಿಸಬೇಕು. ಈ ಹಿಂದೆ ಅವಧಿ ವಿಸ್ತರಣೆಗೆ ದಾಖಲಾತಿಗಳನ್ನು ಸಲ್ಲಿಸಿದ ಅರ್ಜಿ ದಾರರೂ ಸಹ ಸಂಪೂರ್ಣ ದಾಖಲಾತಿಗಳನ್ನು ಪ್ರಸ್ತುತ ಸ್ಥಿತಿಗನುಗುಣವಾಗಿ ಪುನಃ ಸಲ್ಲಿಸುವಂತೆ ಇಲಾಖಾ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.