×
Ad

ಉಡುಪಿ ಈ ಬಾರಿಯೂ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಅಗ್ರಸ್ಥಾನಿಯಾಗಿರಲಿ : ಜಿಲ್ಲಾಧಿಕಾರಿ ಜಿ.ಜಗದೀಶ್

Update: 2021-03-20 17:31 IST

 ಉಡುಪಿ, ಮಾ.20: ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ಯಾವಾಗಲೂ ನಂ.1 ಆಗಿರಬೇಕು. ಈ ಬಾರಿಯೂ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಹಿಂದಿನ ವರ್ಷದ ಫಲಿತಾಂಶಕ್ಕಿಂತ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸಿ, ಈ ಸಲವೂ ರಾಜ್ಯದಲ್ಲಿ ಮೊದಲನೇ ಸ್ಥಾನ ಗಳಿಸುವಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ವಿಶೇಷ ಶ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದ್ದಾರೆ.

ನಗರದ ಎಂಜಿಎಂ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘ ಹಾಗೂ ಎಂಜಿಎಂ ಪದವಿ ಪೂರ್ವಕಾಲೇಜು ಉಡುಪಿ ಇವರ ಸಹಯೋಗದಲ್ಲಿ ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ 2020-21ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣಾ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯ ಶಿಕ್ಷಕರ ಪರಿಶ್ರಮದಿಂದ ಉಡುಪಿ ಜಿಲ್ಲೆ ಶಿಕ್ಷಣದಲ್ಲಿ ರಾಜ್ಯಕ್ಕೇ ಮಾದರಿ ಜಿಲ್ಲೆಯಾಗಿದೆ. ಉಪನ್ಯಾಸಕರು ಉತ್ತಮ ಬೋಧನೆಯ ಮೂಲಕ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ತರುವಲ್ಲಿ ಶ್ರಮ ವಹಿಸಿದ್ದಾರೆ ಎಂದ ಅವರು, ಕೆಲವು ಕಾಲೇಜುಗಳು ಶೇ.90 ಹಾಗೂ ಶೇ.100 ಫಲಿತಾಂಶ ಪಡೆದಿವೆ. ಇದರಿಂದ ಜಿಲ್ಲೆ ರಾಜ್ಯದಲ್ಲೇ ನಂ.1 ಸ್ಥಾನದಲ್ಲಿರಲು ಸಾಧ್ಯವಾಗಿದೆ ಎಂದವರು ನುಡಿದರು.

ಕಾಲೇಜಿನ ಪ್ರಾಂಶುಪಾಲರು ಮತ್ತು ಶಿಕ್ಷಕರು ವಿದ್ಯಾರ್ಥಿಗಳ ಹಿನ್ನಲೆಯನ್ನು ಅರಿತು ಕೊಂಡು, ಕಾಲೇಜಿನ ಫಲಿತಾಂಶ ಕಡಿಮೆ ಬರಲು ಕಾರಣ ತಿಳಿದುಕೊಂಡು ಆ ನಿಟ್ಟಿನಲ್ಲಿ ಹೆಚ್ಚು ಪ್ರಯತ್ನ ಮಾಡಬೇಕು ಎಂದರು. ಪರೀಕ್ಷೆಗೆ ಇನ್ನು ಎರಡು ತಿಂಗಳಿರುವುದರಿಂದ ಹೆಚ್ಚು ಪರೀಕ್ಷೆಗಳನ್ನು ಮಾಡದೇ, ಪೂರ್ವ ಸಿದ್ಧತಾ ಪರೀಕ್ಷೆಯನ್ನು ಮಾಡಬೇಕು ಎಂದು ಜಿ.ಜಗದೀಶ್ ಪ್ರಾಂಶುಪಾಲರಿಗೆ ಸೂಚನೆ ನೀಡಿದರು.

ಕೊರೋನಾ ಸಾಂಕ್ರಾಮಿಕದ ಬಳಿಕ ಶೇ. 90ರಷ್ಟು ವಿದ್ಯಾರ್ಥಿಗಳು ಈಗಾಗಲೇ ಕಾಲೇಜಿಗೆ ಹಾಜರಾಗಿದ್ದು , ಹಾಜರಾಗದ ಶೇ.10 ವಿದ್ಯಾರ್ಥಿಗಳ ಸಮಸ್ಯೆಯನ್ನು ತಿಳಿದುಕೊಂಡು ಅವರಿಗೆ ಪ್ರೋತ್ಸಾಹ ಹಾಗೂ ನೆರವನ್ನು ನೀಡಬೇಕು. ಕಾಲೇಜಿಗೆ ಬರದೇ ಇರುವ ವಿದ್ಯಾರ್ಥಿ ಗಳ ಮನೆಗೆ ಹೋಗಿ ಪೋಷಕರಿಗೆ ಮಾಹಿತಿ ನೀಡಬೇಕು. ಪಿಯುಸಿ ಹಂತ ಎಂಬುದು ವಿದ್ಯಾರ್ಥಿ ಜೀವನದ ಬಹಳ ಮುಖ್ಯ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಲು ಶಿಕ್ಷಕರ ಪ್ರೋತ್ಸಾಹದ ಅಗತ್ಯವಿರುತ್ತದೆ ಎಂದು ಜಿಲ್ಲಾದಿಕಾರಿ ಜಿ.ಜಗದೀಶ್ ಹೇಳಿದರು.

ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಭಗವಂತ ಕಟ್ಟಿಮನಿ ಮಾತನಾಡಿ, ಕಳೆದ ವರ್ಷಕ್ಕಿಂತ ಈ ಬಾರಿ ಉಡುಪಿ ಜಿಲ್ಲೆಯ ಫಲಿತಾಂಶದಲ್ಲಿ ಸುಧಾರಣೆ ಯಾಗುವಂತೆ ಎಲ್ಲರೂ ಕಾರ್ಯನಿರ್ವಹಿಸಬೇಕು. ಈಗಾಗಲೇ ದ್ವಿತೀಯ ಪಿಯುಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಗೊಂಡಿದ್ದು, ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಮಾಡಬೇಕು. ಜಿಲ್ಲೆಯಲ್ಲಿ ಒಟ್ಟು 105 ಕಾಲೇಜುಗಳಿದ್ದು, ಎಲ್ಲಾ ಕಾಲೇಜುಗಳಲ್ಲೂ ಉತ್ತಮ ಫಲಿತಾಂಶ ಬರುವತ್ತ ಗಮನಹರಿಸಬೇಕು ಎಂದರು.

ಈ ಬಾರಿ 3394 ವಿದ್ಯಾರ್ಥಿನಿಯರು ಹಾಗೂ 7253 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 10,647 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿ ದ್ದಾರೆ. ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳ ಮೂಲಕ ಪೂರ್ವ ಸಿದ್ಧತೆಯನ್ನು ಮಾಡಬೇಕು ಎಂದು ಭಗವಂತ ಕಟ್ಟಿಮನಿ ಹೇಳಿದರು.

ಉಡುಪಿ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಮಾಧವ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ವಿ.ಎಸ್. ಕಾಲೇಜಿನ ಪ್ರಾಂಶುಪಾಲ ದಯಾನಂದ ಪೈ, ಪ್ರಾಂಶುಪಾಲರ ಸಂಘದ ಖಜಾಂಚಿ ರಮೇಶ್ ಹಾಗೂ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ಧರು.

ಎಂಜಿಎಂ ಪಿಯು ಕಾಲೇಜಿನ ಪ್ರಾಂಶುಪಾಲೆ ಮಾಲತಿದೇವಿ ಸ್ವಾಗತಿಸಿದರು. ಎಸ್.ವಿ.ಎಚ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪುಂಡರಿಕಾಕ್ಷ ಕೊಡಂಚ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News