ಬಾರಕೂರು ಆರ್‌ಟಿಐ ಕಾರ್ಯಕರ್ತನ ಕೊಲೆ ಯತ್ನ ಪ್ರಕರಣ : ಆರೋಪಿಗಳಿಗೆ ಜಾಮೀನು
Update: 2021-03-20 17:34 IST
ಕುಂದಾಪುರ, ಮಾ.20: ಬಾರಕೂರು ಕಾಳಿಕಾಂಬಾ ಸಭಾಭವನದ ಅಡುಗೆಕೋಣೆಯಲ್ಲಿ ಆರ್‌ಟಿಐ ಕಾರ್ಯಕರ್ತ ಶಂಕರ ಶಾಂತಿ ಎಂಬವರ ಮೇಲೆ ಕಬ್ಬಿಣದ ರಾಡ್‌ನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬ್ರಹ್ಮಾವರ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಬಾರಕೂರಿನ ಪ್ರವೀಣ ಆಚಾರ್ಯ, ನಿತೀನ್‌ಕುಮಾರ್, ರಮೇಶ್ ಹಾಗೂ ಶೇಖರ ಪೂಜಾರಿ ಅವರಿಗೆ ಕುಂದಾಪುರದ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಇಂದು ಜಾಮೀನು ನೀಡಿದೆ.
ಅದೇ ರೀತಿ ಬಂಧನದ ಭೀತಿ ಎದುರಿಸುತಿದ್ದ ಪ್ರಸಾದ ಆಚಾರ್ಯ, ದಿವಾಕರ ಆಚಾರ್ಯ ಹಾಗೂ ಮಂಜಪ್ಪ ಪೂಜಾರಿ ಅವರಿಗೂ ನಿರೀಕ್ಷಣಾ ಜಾಮೀನು ದೊರಕಿದೆ.
ಫೆ.20ರಂದು ಬೆಳಗ್ಗೆ 9:30ಕ್ಕೆ ಘಟನೆ ಜರಗಿದೆ ಎಂದು ಹೇಳಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ದಂಡಸಂಹಿತೆಯ ಕಲಂ 307ರ ಕೆಳಗೆ ಕೊಲೆಯತ್ನದ ಆರೋಪಗಳನ್ನು ಮಾಡಲಾಗಿತ್ತು. ಆರೋಪಿಗಳ ಪರವಾಗಿ ಜಾಮೀನು ಕೋರಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದರು.