×
Ad

ಸರಕಾರಿ ಯೋಜನೆ ಸದುಪಯೋಗವಾಗಲಿ : ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯದಲ್ಲಿ ಡಿಸಿ ರಾಜೇಂದ್ರ

Update: 2021-03-20 20:24 IST

ಮಂಗಳೂರು, ಮಾ.20: ಕಂದಾಯ ಇಲಾಖೆಯ ಮಹತ್ವಾಕಾಂಕ್ಷೆಯ ‘ಜಿಲ್ಲಾಧಿಕಾರಿ ನಡೆ ಹಳ್ಳಿಯೆಡೆಗೆ’ ಎಂಬ ಕಾರ್ಯಕ್ರಮದಿಂದ ಗ್ರಾಮದ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುತ್ತಿದ್ದು, ಸಾರ್ವಜನಿಕರು ಸರಕಾರದ ಯೋಜನೆಗಳನ್ನು ಸದುಪಯೋಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

ಕಂದಾಯ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ, ಬಂಟ್ವಾಳ ತಾಪಂನಿಂದ ವಿಟ್ಲದ ಪಡ್ನೂರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜನರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.

ಗ್ರಾಮದ ಅಭಿವೃದ್ಧಿಗೆ ಆಯಾ ಭಾಗದ ಜನಪ್ರತಿನಿಧಿಗಳು ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು. ಜನರು ತಮ್ಮ ಕಷ್ಟಗಳನ್ನು ನೇರ ವಾಗಿ ತಿಳಿಸಬೇಕು. ಸರಕಾರದ ಹಲವಾರು ಸೌಲಭ್ಯಗಳಾದ ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಕಲಚೇತನರ ವೇತನ, ಎಂಡೋಸಲ್ಫಾನ್ ಪೀಡಿತರ ವೇತನ, ಅಕ್ರಮ ಸಕ್ರಮ ಯೋಜನೆಗಳು, ಮಾತೃ ವಂದನಾ ಯೋಜನೆ, ಜನನಿ ಸುರಕ್ಷಾ ಯೋಜನೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು ಎಂದರು.

ಜನರ ಸಮಸ್ಯೆಗಳನ್ನು ಆಲಿಸಿ ಅವರ ಸಮಸ್ಯೆಗಳನ್ನು ರಾಜ್ಯ ಸರಕಾರಕ್ಕೆ ಪ್ರಸ್ತಾವನೆಯನ್ನು ಕಳುಹಿಸುವುದು ಜಿಲ್ಲಾಡಳಿತದ ಜವಾಬ್ದಾರಿ. ಜಿಲ್ಲೆಯ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು. ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಎರಡು ವಾರಗಳಲ್ಲಿ ಜನರ ಸಮಸ್ಯೆಗಳು ಹಾಗೂ ಪರಿಹಾರಗಳ ವರದಿಯನ್ನು ಬಂಟ್ವಾಳ ತಾಲೂಕಿನ ತಹಶೀಲ್ದಾರ್ ಸಿದ್ಧಪಡಿಸಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಮಾತನಾಡಿ, ವಿಟ್ಲದ ಪಡ್ನೂರು ಗ್ರಾಮವು ಸರಿಯಾದ ಸೌಕರ್ಯಗಳನ್ನು ಒಳಗೊಂಡಿಲ್ಲ. ಈ ಗ್ರಾಮ ವನ್ನು ಅಭಿವೃದ್ಧಿಯೆಡೆಗೆ ಸಾಗಿಸುವ ಕೆಲಸವಾಗಬೇಕಿದೆ ಎಂದರು. ಈ ಗ್ರಾಮದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒಡಗಿಸುವುದ ರೊಂದಿಗೆ ಜನರ ಸಮಸ್ಯೆಗಳನ್ನು ಆಲಿಸಿ ಅವರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಯೆಡೆಗೆ ಕಾರ್ಯಕ್ರಮವು ಬಹಳ ಪ್ರಯೋಜನಕಾ ರಿಯಾಗಿದೆ ಎಂದರು.

ಬಂಟ್ವಾಳ ತಾಲೂಕು ತಹಶೀಲ್ದಾರ್ ರಶ್ಮಿ ಎಸ್.ಆರ್. ಮಾತನಾಡಿ, ಪಡ್ನೂರು ಗ್ರಾಮದಲ್ಲಿ 1,397 ಮನೆಗಳಿದ್ದು, 6,589 ಜನಸಂಖ್ಯೆ ಇದೆ. 94(ಸಿ)ಯಲ್ಲಿ 393 ಅರ್ಜಿಗಳು ಸ್ವೀಕೃತಿಯಾಗಿದ್ದು, 222 ಅರ್ಜಿಗಳು ಮಂಜೂರಾಗಿ, 162 ತಿರಸ್ಕೃತಗೊಂಡು 9 ಅರ್ಜಿಗಳು ಬಾಕಿಯಾಗಿವೆ. 94 (ಸಿಸಿ) ಯಲ್ಲಿ 43 ಅರ್ಜಿಗಳು ಸ್ವೀಕೃತವಾಗಿ, 34 ಅರ್ಜಿಗಳು ಮಂಜೂರಾಗಿ, 9 ಅರ್ಜಿಗಳು ತಿರಸ್ಕೃತಗೊಂಡಿವೆ ಎಂದರು.

ಗ್ರಾಮದಲ್ಲಿ 14 ಜನರು ವೃದ್ಧಾಪ್ಯ ವೇತನ ಪಡೆಯುತ್ತಿದ್ದು, ಸಂಧ್ಯಾ ಸುರಕ್ಷಾದಲ್ಲಿ 221, 77 ಜನರಿಗೆ ಅಂಗವಿಕಲರ ವೇತನ, 169 ಜನರಿಗೆ ವಿಧವಾ ವೇತನ, 20 ಜನರಿಗೆ ಮನಸ್ವಿನಿ ವೇತನ, ಇಬ್ಬರು ಎಂಡೋಸಲ್ಫಾನ್ ಪೀಡಿತರು ವೇತನ ಪಡೆಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಕುಮಾರ್, ಜಿಪಂ ಸದಸ್ಯೆ ಮಂಜುಳಾ ಮಾವೇ, ಬಂಟ್ವಾಳ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೆರಾ, ತಾಪಂ ಸದಸ್ಯೆ ಶೋಭಾ ರೈ, ಪಡ್ನೂರು ಗ್ರಾಪಂ ಉಪಾಧ್ಯಕ್ಷ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.

45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಕಡ್ಡಾಯ

ಕೋವಿಡ್ 2ನೇ ಅಲೆ ವ್ಯಾಪಿಸುತ್ತಿದ್ದು, 45 ವರ್ಷಕ್ಕೂ ಮೇಲ್ಪಟ್ಟವರು ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಜಿಲ್ಲೆಯನ್ನು ಕರೋನ ಮುಕ್ತವಾಗಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News