​ರಾಜ್ಯದ 6 ಕಡೆ ಹೆಲಿಪೋರ್ಟ್‌ಗಳ ಸ್ಥಾಪನೆ: ಸಚಿವ ಸಿ.ಪಿ. ಯೋಗೇಶ್ವರ್

Update: 2021-03-20 15:15 GMT

‌ಮಂಗಳೂರು, ಮಾ.20: ಕರ್ನಾಟಕದಲ್ಲಿ ಪ್ರಮುಖ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕದ ಆರು ಕಡೆಗಳಲ್ಲಿ ಹೆಲಿಕಾಪ್ಟರ್ ನಿಲ್ದಾಣ (ಹೆಲಿಪೋರ್ಟ್)ಗಳನ್ನು ಸ್ಥಾಪಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ಪ್ರವಾಸೋದ್ಯಮಕ್ಕೆ ಉತ್ತೇಜನ ತುಂಬುವ ನಿಟ್ಟಿನಲ್ಲಿ ಮಂಗಳೂರಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಾರ್ವಜನಿಕ ಪ್ರತಿನಿಧಿಗಳ ಜತೆ ಸಂವಾದ ನಡೆಸಿದ ಸಂದರ್ಭ ಅವರು ಈ ವಿಷಯ ತಿಳಿಸಿದರು.

ಬೆಂಗಳೂರು, ಮೈಸೂರು, ಹಂಪಿ, ಕಲಬುರ್ಗಿ, ಮಂಗಳೂರು ಮತ್ತು ಹುಬ್ಬಳ್ಳಿಗಳಲ್ಲಿ ಹೆಲಿಪೋರ್ಟ್‌ಗಳನ್ನು ರಚಿಸಲಾಗುವುದು. ಈ ಹೆಲಿಪೋರ್ಟ್‌ ಗಳಿಗೆ ಹತ್ತಿರವಾಗುವಂತೆ ಇನ್ನೂ ಹಲವು ಹೆಲಿಪ್ಯಾಡ್ ನಿರ್ಮಿಸುವ ಆಲೋಚನೆಯಿದೆ. ಈ ಬಗ್ಗೆ ಸರ್ವೆ ಕಾರ್ಯ ಆರಂಭಿಸಲಾಗಿದೆ ಎಂದವರು ಹೇಳಿದರು.

ಕರಾವಳಿ ಭಾಗದಲ್ಲಿ ಸೀ ಪ್ಲೇನ್‌ಗೆ ಅವಕಾಶ ಕೋರಿ ಕೇಂದ್ರ ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಒಪ್ಪಿಗೆ ದೊರಕಿದ್ದು, ಉಡಾನ್ ಯೋಜೆಯಡಿ ಸೀ ಪ್ಲೇನ್ ಆರಂಭವಾಗಲಿದೆ. ಈ ನಿಟ್ಟಿನಲ್ಲಿ ಸರ್ವೆ ಮಾಡಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News