ಬಿ.ಸಿ.ರೋಡ್ : ಜ್ಯೋತಿಷಿ ಮೇಲೆ ಹಲ್ಲೆ
ಬಂಟ್ವಾಳ, ಮಾ. 20: ಬಿ.ಸಿ.ರೋಡಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಕಾರ್ಯನಿರ್ವಹಿಸುವ ಜ್ಯೋತಿಷಿಗೆ ಮಹಿಳೆಯ ಸಹಿತ ಇಬ್ಬರು ರಾಡ್ ನಿಂದ ಹಲ್ಲೆಗೈದು ಪರಾರಿಯಾದ ಘಟನೆ ಶನಿವಾರ ಬಿ.ಸಿ.ರೋಡಿನ ಕಾಂಪ್ಲೆಕ್ಸ್ ಒಂದರಲ್ಲಿ ನಡೆದಿದೆ ಎನ್ನಲಾಗಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದ ಪಂಡಿತ್ ಲಕ್ಮೀಕಾಂತ್ ಭಟ್ ಎಂಬವರಿಗೆ ಅಪರಿಚಿತರಿಬ್ಬರು ಹಲ್ಲೆಗೈದಿದ್ದು, ಗಾಯಾಳುವನ್ನು ಮಂಗಳೂರಿನ ಆಸ್ಪತ್ರಯೊಂದಕ್ಕೆ ದಾಖಲಿಸಲಾಗಿದೆ.
ಮೂಡಬಿದ್ರೆಯ ರಾಘವೇಂದ್ರ ಎಂದು ಹೆಸರು ಹೇಳಿಕೊಂಡು ಜ್ಯೋತಿಷ್ಯ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಜೊತೆ ಮಧ್ಯಾಹ್ನದ ಜ್ಯೋತಿಷ್ಯಾ ಲಯಕ್ಕೆ ಅಗಮಿಸಿ ಏಕಾಏಕಿ ಹಲ್ಲೆಗೈದು ಬಾಗಿಲು ಹಾಕಿ ಪರಾರಿಯಾಗಿದ್ದರೆನ್ನಲಾಗಿದೆ. ಇದಕ್ಕೂ ಮೊದಲು ಕರೆ ಮಾಡಿ ಜ್ಯೋತಿಷ್ಯ ಕೇಳಲು ಸಮಯವನ್ನು ಕೋರಿದ್ದನೆನ್ನಲಾಗಿದ್ದು ಈ ಸಂದರ್ಭ ಲಕ್ಷ್ಮೀಕಾಂತ್ ಅವರು ಸಂಜೆ 5 ಗಂಟೆಯವರೆಗೆ ಮಾತ್ರ ಇರುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಮಹಿಳೆ ಸಹಿತ ಇಬ್ಬರು ಮಾಸ್ಕ್ ಧರಿಸಿಕೊಂಡು ಅಗಮಿಸಿ ರಾಡ್ ನಿಂದ ಹಲ್ಲೆಗೈದು ಜ್ಯೋತಿಪ್ಯಾಲಯದ ಮುಂಭಾಗಿಲನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆಯಿಂದ ಮೂರ್ಚೆ ಹೋಗಿದ್ದು, ಎಚ್ಚರವಾದ ಬಳಿಕ ಅವರೇ ಎದ್ದು ರೂಮ್ ನಿಂದ ಹೊರ ಬಂದಿದ್ದಾರೆ. ರಕ್ತಸಿಕ್ತವಾದ ರೀತಿಯಲ್ಲಿ ಪಂಡಿತ್ ಅವರನ್ನು ಗಮನಿಸಿದ ಪಕ್ಕದ ಕೋಣೆಯವರು ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಸೇರಿಸಲಾಗಿದೆ.
ಈ ಘಟನೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ, ವಯಕ್ತಿಕ ವಿಚಾರದಲ್ಲಿ ಕೃತ್ಯ ನಡೆದಿರುವ ಗುಮಾನಿಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸುದ್ದಿ ತಿಳಿದ ಬಂಟ್ವಾಳ ನಗರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಸ್ ಐ ಕಲೈಮಾರ್ ಮತ್ತವರ ಸಿಬ್ಬಂದಿ, ಇನ್ಸ್ ಪೆಕ್ಟರ್ ಚೆಲುವರಾಜ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಮೂಲತ ಬಾಗಲಕೋಟೆ ನಿವಾಸಿಯಾಗಿರುವ ಜ್ಯೋತಿಷಿ ಲಕ್ಷ್ಮೀಕಾಂತ್ ಭಟ್ 30 ವರ್ಷದಿಂದ ಮಂಗಳೂರಿನ ಕಾವೂರಿನಲ್ಲಿ ವಾಸ್ತವ್ಯವಿದ್ದು 8 ವರ್ಷಗಳಿಂದ ಬಿ.ಸಿ.ರೋಡಿನಲ್ಲಿ ಜ್ಯೋತಿಷ್ಯಾಲಯ ವಾಣಿಜ್ಯ ಸಂಕೀರ್ಣದಲ್ಲಿ ಜ್ಯೋತಿಷ್ಯಾಲಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.