ಕೊಂಕಣಿ ಭವನ ನಿರ್ಮಾಣಕ್ಕೆ ಸರಕಾರದಿಂದ 5 ಕೋಟಿ ರೂ.: ಸಚಿವ ಕೋಟ

Update: 2021-03-20 16:00 GMT

ಉಡುಪಿ, ಮಾ.20: ಮಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಂಕಣಿ ಭವನಕ್ಕೆ ರಾಜ್ಯ ಸರಕಾರ ಶೀಘ್ರವೇ ಐದು ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಿದೆ ಎಂದು ರಾಜ್ಯದ ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.

ಮಂಗಳೂರಿನ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಣಿಪಾಲದ ಆರ್‌ಎಸ್‌ಬಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ 2 ದಿನಗಳ ಕೊಂಕಣಿ ಸಾಹಿತ್ಯ ಸಮ್ಮೇಳನ ವನ್ನು ಶನಿವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಈ ಹಿಂದೆ ನೀಡಲಾಗುತ್ತಿದ್ದ ಕನಿಷ್ಠ ಅನುದಾನವನ್ನು 50 ಲಕ್ಷ ರೂ.ಗೆ ಏರಿಸಲಾಗಿದೆ. ಸಾಹಿತ್ಯ, ಕಲೆ, ಸಂಸ್ಕೃತಿ ಉದ್ಯಮ ಕ್ಷೇತ್ರದಲ್ಲಿ ಕೊಂಕಣಿಗರ ಕೊಡುಗೆ ದೊಡ್ಡದಿದೆ. ಮಣಿಪಾಲ, ಉಡುಪಿ ದೇಶದಲ್ಲೇ ಆರೋಗ್ಯ ಮತ್ತು ಶಿಕ್ಷಣದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರ ಹಿಂದೆ ಕೊಂಕಣಿ ಸಮುದಾಯದ ಹಿರಿಯರ ಪರಿಶ್ರಮವಿದೆ ಎಂದರು.

ದೇಶದಲ್ಲಿ ವಿವಿಧ ಧರ್ಮಗಳ 43 ಸಮುದಾಯದ ಮಂದಿ ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ. ಉತ್ತರದ ಕಾಶ್ಮೀರದಿಂದ ದಕ್ಷಿಣದ ಕನ್ಯಾಕುಮಾರಿಯವರೆಗೆ ಕೊಂಕಣಿಗರ ಇತಿಹಾಸ ರೂಪುತಳೆದಿದೆ. ಪೋರ್ಚಗೀಸರ ದಬ್ಬಾಳಿಕೆ ನಡುವೆಯೂ ನೆಲದ ಸಂಸ್ಕೃತಿ ಪರಂಪರೆ ಯನ್ನು ಕೊಂಕಣಿಗರು ಎತ್ತಿಹಿಡಿದಿದ್ದಾರೆ ಎಂದು ಸಚಿವರು ನುಡಿದರು.

ಕೆಎಂಸಿ ಮಂಗಳೂರು ಹಾಗೂ ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ತಜ್ಞ ವೈದ್ಯ ಡಾ.ಕಸ್ತೂರಿ ಮೋಹನ ಪೈ ಸಮ್ಮೇಳನಾಧ್ಯಕ್ಷತೆಯನ್ನು ವಹಿಸಿದ್ದರು. ಶಾಸಕ ಲಾಲಾಜಿ ಮೆಂಡನ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಡುಪಿ ತಾ.ಪಂ ಅಧ್ಯಕ್ಷೆ ಸಂಧ್ಯಾ ಕಾಮತ್, ಕರ್ನಾಟಕ ಕೊಂಕಣಿ ಸಾಹಿತ್ಯ ಆಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಗೋಕುಲ್ ದಾಸ್ ನಾಯಕ್, ಕಾರ್ಯಾಧ್ಯಕ್ಷ ಮಹೇಶ್ ಠಾಕುರ್, ಪ್ರದಾನ ಕಾರ್ಯದರ್ಶಿ ಅಮೃತ್ ಶೆಣೈ, ಮಣಿಪಾಲದ ಎಸ್.ಸಂಜೀವ್ ಪಾಟಿಲ್, ಆಕಾಡೆಮಿ ಸದಸ್ಯರಾದ ಗುರುಮೂರ್ತಿ ವಿ.ಶೇಟ್, ಗೋಪಾಲಕೃಷ್ಣ ಭಟ್, ನವೀನ್ ನಾಯಕ್, ಚಿದಾನಂದ ಭಂಡಾರಿ, ಭಾಸ್ಕರ ನಾಯಕ್, ಸುರೇಂದ್ರ ವಿ.ಪಾಲನಕರ, ಪ್ರಮೋದ್ ಶೇಟ್, ಕುಂದಾಪುರ ನಾರಾಯಣ ಖಾರ್ವಿ, ಡಾ.ವಸಂತ ಬಾಂದೇಕರ್, ಅರುಣ್ ಜಿ.ಶೇಟ್, ಕೆನ್ಯೂಟ್ ಜೀವನ್ ಪಿಂಟೋ, ರಿಜಿಸ್ಟ್ರಾರ್ ಮನೋಹರ್ ಕಾಮತ್, ಗೌರವ ಸಲಹೆಗಾರರಾದ ಪ್ರದೀಪ್ ಜಿ.ಪೈ, ನಂದಗೋಪಾಲ ಶೆಣೈ, ಸಂಧ್ಯಾ ಪೈ, ಕುಯ್ಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಧಾನ ಸಂಚಾಲಕಿ ಪೂರ್ಣಿಮ ಸುರೇಶ್ ನಾಯಕ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸಾಣೂರು ನರಸಿಂಹ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಪ್ರಕಟಿಸಲಾದ ಐದು ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.

ರವಿವಾರ ಸಮ್ಮೇಳನದಂಗವಾಗಿ ಕೊಂಕಣಿಯಲ್ಲಿ ವಿಚಾರಗೋಷ್ಠಿ, ಕವಿಗೋಷ್ಠಿ, ಕಥಾಗೋಷ್ಠಿ, ಶಿಕ್ಷಣ ಗೋಷ್ಠಿ, ಹಾಸ್ಯ ಗೋಷ್ಠಿಗಳು ನಡೆಯಲಿವೆ. ಸಂಜೆ 4ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News