ಕೃಷಿಯ ಬಗ್ಗೆ ಪುನರಾವಲೋಕನದ ಅಗತ್ಯವಿದೆ : ಡಾ.ಧನಂಜಯ

Update: 2021-03-20 16:43 GMT

ಉಡುಪಿ, ಮಾ. 20: ನಾವು ಈವರೆಗೆ ಮಾಡಿಕೊಂಡು ಬರುತಿದ್ದ ಕೃಷಿಯ ಬಗ್ಗೆ ಪುನರಾವಲೋಕನದ ಅಗತ್ಯವಿದೆ. ಕೃಷಿಯ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು. ರಾಸಾಯನಿಕಗಳ ಅಧಿಕ ಬಳಕೆಯ ದುಷ್ಪರಿಣಾಮಗಳನ್ನು ಅರಿತುಕೊಳ್ಳಬೇಕಾಗಿದೆ. ಸಾವಯವಗಳ ಬಳಕೆಗೆ ಒತ್ತು ನೀಡಬೇಕಿದೆ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ಕೃಷಿ ವಿಜ್ಞಾನಿ ಡಾ.ಧನಂಜಯ ಹೇಳಿದ್ದಾರೆ.

ಉಡುಪಿಯ ಎಂಜಿಎಂ ಕಾಲೇಜು, ಮಾನವಿಕ ಮತ್ತು ಭಾಷಾ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಹಾಗೂ ಐಕ್ಯುಎಸಿಗಳು ಸಂಯುಕ್ತವಾಗಿ ಕಾಲೇಜಿನ ಆವರಣದಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡ ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ‘ಎಂ.ಜಿ.ಎಂ. ಕೃಷಿ ಸಮ್ಮಿಲನ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ನಾವು ಕೃಷಿ ಮಾಡುವ ಮಣ್ಣಿಗೂ ಜೀವವಿದೆ. ಮಣ್ಣಿನ ಆರೋಗ್ಯಕ್ಕೆ ಸೂಕ್ಷ್ಮ ಜೀವಾಣುಗಳು ಮುಖ್ಯ. ರಾಸಾಯನಿಕಗಳ ಅತಿಯಾದ ಬಳಕೆ ಸೂಕ್ಷ್ಮ ಜೀವಾಣುಗಳಿಗೆ ಮಾರಕವಾಗಿಗುತ್ತವೆ. ಹೀಗಾಗಿ ಕೃಷಿಯಲ್ಲಿ ಮಣ್ಣು ಹಾಳಾಗದಂತೆ ನೋಡಿಕೊಳ್ಳುವುದು ಮುಖ್ಯ. ಮಣ್ಣು ಜೀವಂತವಿರು ವಲ್ಲಿ ಸಾವಯವ ಗೊಬ್ಬರಗಳ ಪಾತ್ರ ಮುಖ್ಯವಾಗಿದೆ ಎಂದು ಅವರು ವಿವರಿಸಿದರು.

ಇಂದು ಹೆಚ್ಚು ಹೆಚ್ಚು ಯುವಕರು ಕೃಷಿಯತ್ತ ಒಲವು ತೋರಿಸುತಿದ್ದಾರೆ. ಅವರ ನಿರೀಕ್ಷೆ ತುಂಬಾ ಬೇರೆಯಾಗಿದೆ. ಆತ್ಮವಿಶ್ವಾಸವೂ ಅವರಲ್ಲಿದೆ. ಸಮಗ್ರ ಕೃಷಿಯ ಕುರಿತಂತೆ ಇಂದು ರೈತರಿಗೆ ಸರಿಯಾದ ಮಾಹಿತಿ ಸಿಗುವಂತಾಗಬೇಕು. ಮಾಹಿತಿ ಸಿಗದೇ ಕೃಷಿಯಲ್ಲಿ ಹೆಚ್ಚು ಲಾಭಗಳಿಸಲು ಸಾಧ್ಯವಿಲ್ಲ ಎಂದರು.

ಶ್ರಮದಾಯಕವಾದರೂ ತರಕಾರಿ, ಹಣ್ಣುಗಳನ್ನು ಬೆಳೆಯುವುದರಿಂದ ಹೆಚ್ಚು ಲಾಭ ಗಳಿಸಬಹುದು. ಅವುಗಳ ವೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಬೇಕು. ತೆಂಗಿನಮರದಿಂದ ಸಿಗುವ ನೀರಾ-ಕಲ್ಪರಸ ಆರೋಗ್ಯಾದಾಯಕದೊಂದಿಗೆ ಖಂಡಿತ ರೈತರಿಗೆ ಲಾಭದಾಯಕ ಉತ್ಪನ್ನವಾಗಿದೆ ಎಂದು ಡಾ.ಧನಂಜಯ ತಿಳಿಸಿದರು.

ಪ್ರಗತಿಪರ ಕೃಷಿಕರಾದ ಹಿರಿಯಡ್ಕದ ನಟರಾಜ್ ಹೆಗ್ಡೆ ಹಾಗೂ ರಾಷ್ಟ್ರೀಯ ಸಾಧನಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್ ಕೃಷಿಯನ್ನು ಹೇಗೆ ಲಾಭದಾಯಕವಾಗಿ ಮಾಡಬಹುದು ಎಂಬುದನ್ನು ಆಸಕ್ತ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ.ದೇವಿದಾಸ್ ನಾಯ್ಕಾ ಅಧ್ಯಕ್ಷತೆ ವಹಿಸಿದ್ದರು.ಎಂಜಿಎಂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಾಲತಿ ದೇವಿ, ಐಕ್ಯುಎಸಿಯ ಸಂಯೋಜಕ ಅರುಣ್‌ಕುಮಾರ್ ಬಿ., ನಿರ್ಮಿತಿ ಕೇಂದ್ರದ ಅರುಣ್‌ಕುಮಾರ್ ಉಪಸ್ಥಿತರಿದ್ದರು.

ಎಂಜಿಎಂ ಕೃಷಿ ಸಮ್ಮಿಲನದ ಸಂಚಾಲಕ, ಪತ್ರಿಕೋದ್ಯಮ ವಿಭಾಗದ ಮಂಜುನಾಥ ಕಾಮತ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರೆ, ಸುಚಿತ್ ಕೋಟ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತಜ್ಞರಿಂಂದ ಉಪಸ್ಯಾಸ ಕಾರ್ಯಕ್ರಮಗಳು ಮಾತಿನ ಮಾಲಿಕೆಯಲ್ಲಿ ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News