ಕೃಷಿ ರಾಯಭಾರಿಗಳಾಗಿ ಅನುಭವ ಪಡೆದ ವಿದ್ಯಾರ್ಥಿ ಸಮುದಾಯ
ಉಡುಪಿ, ಮಾ.20: ಎಂಜಿಎಂ ಕಾಲೇಜು ಆವರಣದಲ್ಲಿ ಇಂದು ಆಯೋಜಿಸಲಾದ ಕೃಷಿ ಸಮ್ಮಿಲನದಲ್ಲಿ ಕಾಲೇಜಿನ ವಿದ್ಯಾರ್ಥಿ ಸಮೂಹವೇ ಕೃಷಿಯ ರಾಯಭಾರಿಗಳಾಗಿ ಕಾಣಿಸಿಕೊಂಡರು. ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಸಮ್ಮಿಲನದಲ್ಲಿ ಸಕ್ರಿಯರಾಗಿ ಭಾಗವಹಿಸಿ ಹೊಸ ಅನುಭವವನ್ನು ಪಡೆದು ಅದನ್ನು ಉಳಿದವರಲ್ಲಿ ಹಂಚಿಕೊಂಡರು.
ಜಿಲ್ಲೆಯ ಕೃಷಿಕರಿಂದ ಕೃಷಿ ಉತ್ಪನ್ನಗಳ ಪ್ರದರ್ಶನ, ಮಾರಾಟ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕೃಷಿಕರು ತಾವು ಬೆಳೆದ ಸಾವಯವ ಹಣ್ಣು, ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿದರು.ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಊರಿನ ತಾಜಾ ತರಕಾರಿಗಳು ಬೇಗನೆ ಖಾಲಿಯಾದವು.
ಊರಿನ ಬೆಂಡೆಕಾಯಿ ಕೆಲವೇ ಕ್ಷಣಗಳಲ್ಲಿ ಮಾರಾಟವಾಗಿ ಹೋದವು. ಅದೇ ರೀತಿ ಅಲಸಂಡೆ, ಬಳಸೆ ಸೊಪ್ಪುಗಳ ಖರೀದಿಗೆ ಜನ ಮುಗಿಬಿದ್ದರು. ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚು ಬೇಡಿಕೆಯನ್ನು ಪಡೆದಿತ್ತು. ಮತ್ತೊಂದೆಡೆ ವಿದ್ಯಾರ್ಥಿಗಳೇ ಕೃಷಿ ತಜ್ಞರಂತೆ ಗ್ರಾಹಕರನ್ನು ಸೆಳೆದು ವಿವಿಧ ತರಕಾರಿ, ಹಣ್ಣಿನ ಹಾಗೂ ಹೂವಿನ ಬೀಜಗಳನ್ನು ಮಾರಾಟ ಮಾಡುತಿದ್ದರು.
ಸಮ್ಮಿಲನದಲ್ಲಿ ಕಲಾವಿದ, ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಮ್ಮ ಸುತ್ತಮುತ್ತಲಿನ ಕಾಡುತ್ಪತ್ತಿಗಳ ಪರಿಚಯ ಹಾಗೂ ಅವುಗಳ ವೌಲ್ಯವರ್ಧನೆಯ ವಿಶೇಷ ಪ್ರಯೋಗಗಳನ್ನು ಪರಿಚಯಿಸಿದರು. ಅಡ್ವೆ ಅವರು ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವುಗಳಿಂದ ವಿವಿಧ ತಿಂಡಿಯನ್ನು ತಯಾರಿಸಿ ಪರಿಚಯಿಸಿದರು.
ಮಜ್ಜಿಗೆ ಹುಲ್ಲನಿಂದ ಲಿಂಬೆಯನ್ನು ಸಿಪ್ಪೆ ಸಹಿತ ಬಳಸಿ ತಯಾರಿಸಿದ ಜ್ಯೂಸ್ ಇಲ್ಲಿಗೆ ಹೊಸ ಪರಿಚಯವಾದರೆ, ಸುವರ್ಣ ಗಡ್ಡೆಯ ಕಟ್ಲೇಟ್, ಪತ್ರೊಡೆ, ಹಲಸಿನ ಕಾಯಿಯ ಮಂಚೂರಿ, ಕಬಾಬ್ ಎಲ್ಲರ ಬಾಯಲ್ಲಿ ನೀರಿಳಿಸುವಂತೆ ಮಾಡಿತ್ತು. ಅಲ್ಲದೇ ಅವರು ಮಟ್ಟುಗುಳ್ಳ ಹಾಗೂ ಜೀಗುಜ್ಜೆಯ ಪಿಟ್ಜಾವನ್ನು ತಯಾರಿಸಿ ರುಚಿ ಹಿಡಿಸಿದರು. ದಿರ್ಸಲೆ ಮೆಣಸಿನ ಟೀ, ಮಜ್ಜಿಗೆ ಹುಲ್ಲಿನ ಜ್ಯೂಸ್ ಅವರ ಇನ್ನೆರಡು ವಿಶೇಷವೆನಿಸಿತ್ತು.
ಅಲ್ಲದೇ ಕಾಡಿನಲ್ಲಿ ಸಿಗುವ ಮಾವಿನ ಶುಂಠಿ, ಕರಿ ಅರಸಿನ, ಕಾಡಡಿಕೆ, ಈಚಲು ಹಣ್ಣುಗಳನ್ನು ಅವರು ಪ್ರದರ್ಶಿಸಿದರು.