×
Ad

ದ.ಕ. ಜಿಲ್ಲೆಯ 'ಗ್ರಾಮ ವಾಸ್ತವ್ಯ' ಕಾರ್ಯಕ್ರಮ ಯಶಸ್ವಿ: ಡಿಸಿ ರಾಜೇಂದ್ರ ಕೆವಿ

Update: 2021-03-20 22:34 IST

ಬಂಟ್ವಾಳ, ಮಾ.20: ಗ್ರಾಮದ ಜನರ ಅಹವಾಲುಗಳನ್ನು ಆಲಿಸಿ ಅವರ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು ಜಿಲ್ಲೆಯಲ್ಲಿ ಈಗಾಗಲೇ ನಡೆದ ಎರಡು ಪ್ರಯೋಗಿಕ ಕಾರ್ಯಕ್ರಮ ಯಶಸ್ಸು ಕಂಡಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ.‌ ತಿಳಿಸಿದ್ದಾರೆ. ‌

ಜಿಲ್ಲಾಡಳಿತ ಮತ್ತು ಬಂಟ್ವಾಳ ತಾಲೂಕು ಆಡಳಿತದ ಆಶ್ರಯದಲ್ಲಿ 'ಜಿಲ್ಲಾಧಿಕಾರಿಯ ನಡೆ, ಹಳ್ಳಿಯ ಕಡೆ' ಧ್ಯೇಯ ವಾಕ್ಯದೊಂದಿಗೆ ತಾಲೂಕಿನ ವಿಟ್ಲ ಪಡ್ನೂರು ಗ್ರಾಮದ ಕೊಡುಂಗಾಯಿ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಯವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸಂಧ್ಯಾಸುರಕ್ಷ ಯೋಜನೆ, ಬಿಪಿಎಲ್ ಪಡಿತರ ಚೀಟಿ, ವಿಕಲ ಚೇತನ ವೇತನ, ಪಿಂಚನಿ, ವಿಧವಾ ವೇತನ, ಮನಸ್ವಿನಿ ಯೋಜನೆ, ನೀರು, ರಸ್ತೆ, ಮೊದಲಾದ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಬಹಳಷ್ಟು ಅರ್ಜಿಗಳು ಬಂದಿವೆ. ಎಲ್ಲರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲಾಗುವುದು. ಸ್ಥಳದಲ್ಲೇ ಪರಿಹಾರ ಮಾಡಬಹುದಾದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು. ಉಳಿದ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ಅವರು ತಿಳಿಸಿದರು. 

ಕಡಬ ಮತ್ತು ಬೆಳ್ತಂಗಡಿಯಲ್ಲಿ ನಡೆಸಿದ ಗ್ರಾಮ ವಾಸ್ತವ್ಯದಲ್ಲಿ ಸಾರ್ವಜನಿಕರ ಶೇ. 70ರಷ್ಟು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡಲಾಗಿದೆ. ಶೇ. 10ರಷ್ಟು ಅರ್ಜಿಗಳು ಕಡತಗಳ ಮೂಲಕ ಸೂಕ್ತ ವ್ಯವಸ್ಥೆಗೆ ತಲುಪಿದೆ. ಉಳಿದ ಶೇ. 20ರಷ್ಟು ಅರ್ಜಿಗೆ ಸರಕಾರದ ಹಂತದಲ್ಲಿ ಪರಿಹಾರ ಆಗಬೇಕಿರುವುದರಿಂದ ಅವುಗಳನ್ನು ಸರಕಾರಕ್ಕೆ ಕಳುಹಿಸಿಕೊಡಲಾಗಿದೆ ಎಂದು ಹೇಳಿದರು. 

ಗ್ರಾಮ ಸಭೆ ಮತ್ತು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಎರಡೂ ಭಿನ್ನವಾಗಿದೆ. ಗ್ರಾಮ ಸಭೆಯಲ್ಲಿ ಸಮಸ್ಯೆಯ ಬಗ್ಗೆ ಚರ್ಚೆ ಮಾಡಿ ಅಧಿಕಾರಿಗಳಿಗೆ ಕಳುಹಿಸಿಕೊಡಲಾಗುತ್ತದೆ. ಆದರೆ ಗ್ರಾಮ ವಾಸ್ತವ್ಯದಲ್ಲಿ ಅಧಿಕಾರಿಗಳು ನೇರವಾಗಿ ಜನರ ಬಳಿಗೆ ಬಂದು ಅಹವಾಲು ಆಲಿಸಿ ಅವುಗಳನ್ನು ಸ್ಥಳದಲ್ಲೇ ಇತ್ಯರ್ಥ ಮಾಡುತ್ತಾರೆ. ಗ್ರಾಮ ಸಭೆಯಲ್ಲಿ ಕೇವಲ ನಿರ್ಣಯವಾಗುತ್ತದೆ. ಆದರೆ ಗ್ರಾಮ ವಾಸ್ತವ್ಯದಲ್ಲಿ ಪರಿಹಾರ ಲಭಿಸುತ್ತದೆ ಎಂದು ತಿಳಿಸಿದರು. 

ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ಜಿಲ್ಲಾಧಿಕಾರಿ ಸಹಿತ ಜಿಲ್ಲೆಯ ಮತ್ತು ತಾಲೂಕಿನ ಅಧಿಕಾರಿಗಳನ್ನು ಜನರ ಬಳಿಗೆ ತಲುಪಿಸುವ ಕಾರ್ಯಕ್ರಮವೇ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ ವಾಗಿದೆ. ಇಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದಾರೆ. ನಿಮ್ಮ ಹಾಗೂ ಗ್ರಾಮದ ಸಮಸ್ಯೆಗಳನ್ನು ಅವರಲ್ಲಿ ಹೇಳಿ ಬಗೆಹರಿಸಿಕೊಳ್ಳಿ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ವೇದಿಕೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯತ್ ಸಿಒ ಕುಮಾರ್, ಎಸಿ ಮದನ್ ಮೋಹನ್, ಬಂಟ್ವಾಳ ತಹಶಿಲ್ದಾರ್ ರಶ್ಮಿ ಎಸ್.ಆರ್., ಬಂಟ್ವಾಳ ತಾಲೂಕಿನ ಪಂಚಾಯತ್ ಇಒ ರಾಜಣ್ಣ ಸಹಿತ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

''ಗಡಿ ಪ್ರದೇಶ ಸಹಿತ ಇಡೀ ಜಿಲ್ಲೆಯಲ್ಲಿ ಮಾದಕ ವಸ್ತುಗಳ ನಿಯಂತ್ರಣದ ಬಗ್ಗೆ ಕಳೆದ ಆರು ತಿಂಗಳಲ್ಲಿ ಪೊಲೀಸರ ಮೂರು ಸಭೆಗಳನ್ನು ನಡೆಸಲಾಗಿದೆ. ಮಾದಕ ವಸ್ತುಗಳ ಸಣ್ಣ ಪುಟ್ಟ ಪ್ರಕರಣಗಳನ್ನು ಭೇದಿಸುವ ಜೊತೆಗೆ ಆ ಜಾಲದ ಬುಡವನ್ನೇ ಪತ್ತೆಹಚ್ಚಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಮಂಗಳೂರು ಪೊಲೀಸ್ ಆಯುಕ್ತರ ಜೊತೆ ಚರ್ಚಿಸಿದ್ದೇನೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ''.

- ಡಾ. ರಾಜೇಂದ್ರ ಕೆ.ವಿ., ದಕ್ಷಿಣ ಕನ್ನಡ ಜಿಲ್ಲಾಧಿಕಾರಿ


ಬಾಕ್ಸ್ 
12 ಗಂಟೆ ರಾತ್ರಿಯಾದರೂ ಗ್ರಾಮದಲ್ಲೇ ಇರುತ್ತೇನೆ! 

ಸೆಕೆಯಲ್ಲಿ ಕಾದು ಸುಸ್ತಾದ ಗ್ರಾಮಸ್ಥರಿಗೆ ತಂಪೆರದ ಜಿಲ್ಲಾಧಿಕಾರಿ  

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಬೆಳಗ್ಗೆ 10 ಗಂಟೆಗೆ ನಿಗಧಿ ಪಡಿಸಲಾಗಿತ್ತು. ಆದರೆ ಮಂಗಳೂರಿನಲ್ಲಿ ಪ್ರವಾಸೋದ್ಯಮ ಸಚಿವರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಆಗಮಿಸುವಾಗ ಸಮಯ ಮಧ್ಯಾಹ್ನ 12:45 ಆಗಿತ್ತು. ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತಾದರೂ ಸೆಕೆಯಿಂದ ಸಾರ್ವಜನಿಕರು ಜಿಲ್ಲಾಧಿಕಾರಿಯನ್ನು ಕಾದು ಸುಸ್ತಾಗಿದ್ದರು. ಕಾರಿನಿಂದ ಇಳಿದು ನೇರವಾಗಿ ವೇದಿಕೆಗೆ ಆಗಮಿಸಿದ ಜಿಲ್ಲಾಧಿಕಾರಿ ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಸ್ವಾಗತ, ಪ್ರಾಸ್ತಾವಿಕ ಭಾಷಣ ಮಾಡದೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. "ಸೂಕ್ತ ಕಾರಣದಿಂದ ನಾನು ಇಲ್ಲಿಗೆ ಬರುವಾಗ ತಡವಾಗಿದೆ. ಯಾರೂ ನಿರಾಶೆಯಾಗುವುದು ಬೇಡ. ಇಲ್ಲಿರುವ ಪ್ರತೀಯೊಬ್ಬನ ಕಟ್ಟಕಡೆಯ ಅಹವಾಲು ಆಳಿಸಿ ಅದಕ್ಕೆ ಪರಿಹಾರ ದೊರಕಿಸಲಾಗುವುದು. ಅಲ್ಲದೆ ಗ್ರಾಮದ ರಸ್ತೆ, ನೀರು, ಶಾಲೆ, ಅಂಗನವಾಡಿ ಹೀಗೆ ಸಮಸ್ಯೆ ಇರುವ ಕೆಲವೊಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿಯೇ ಇಲ್ಲಿಂದ ನಾನು ತೆರಳುವುದು. ರಾತ್ರಿ ಸಮಯ 12 ಗಂಟೆಯಾದರೂ ಸರಿ ನಾನು ಇಲ್ಲಿಯೇ ಇದ್ದೇನೆ. ಇನ್ನು ಇಲ್ಲೇ ಉಳಿಯುವ ಸಂದರ್ಭ ಬಂದರೂ ನಾನು ಉಳಿದು ನಿಮ್ಮ ಅಹವಾಲು ಸ್ವೀಕರಿಸುತ್ತೇನೆ" ಎಂದು ಗ್ರಾಮಸ್ಥರಿಗೆ ಭರವಸೆ ತುಂಬಿದರು. ಬಳಿಕ ಮಧ್ಯಾಹ್ನ 3 ಗಂಟೆಯ ವರೆಗೆ ಗ್ರಾಮಸ್ಥರ ಅಹವಾಲು ಸ್ವೀಕರಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಹಲವು ಸಮಸ್ಯೆಗಳನ್ನು ಸ್ಥಳದಲ್ಲೇ ಇತ್ಯರ್ಥ ಪಡಿಸಿದರು. ಊಟದ ಬಳಿಕ ಮತ್ತೆ ಅರ್ಜಿ ಸ್ವೀಕರಿಸುವುದು ಮುಂದುವರಿಯಿತು.

ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿದ್ದಕ್ಕೆ ಪ್ರತಿಭಟಿನೆ ನಡೆಸಿದವರ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಪಂಚಾಯತ್ ಸದಸ್ಯರು ಮತ್ತು ಗ್ರಾಮಸ್ಥೆಯ ವಿರುದ್ದ ಹಾಕಿದ್ದ ಜಾತಿ ನಿಂದನೆ ಪ್ರಕರಣದ ನಾಲ್ಕು ಮಂದಿಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ.
ತೆಂಕನಿಡಿಯೂರು ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡದೇ ಪಂಚಾಯತ್ ಮುಖ್ಯದ್ವಾರವನ್ನೇ ಬದಲಾವಣೆ ಮಾಡಿದ್ದು ಇದನ್ನು ಪ್ರಶ್ನಿಸಿದ ಗ್ರಾಮ ಪಂಚಾಯತ್ ಸದಸ್ಯರಾದ  ಸುರೇಶ್ ನಾಯಕ್, ಸತೀಶ್ ನಾಯಕ್ ,ಮೀನಾ ಪಿಂಟೊ, ಪ್ರಥ್ವಿರಾಜ್ ಶೆಟ್ಟಿ ಮತ್ತು ಗ್ರಾಮಸ್ಥರಾದ ಲಲಿತಾ ಆಚಾರ್ಯ ಮೇಲೆ ಗ್ರಾಮ ಪಂಚಾಯತ್ ಅಧ್ಯಕ್ಷರು ಜಾತಿ ನಿಂದನೆ ಪ್ರಕರಣ ದಾಖಲಿಸದ್ದರು. 
ನಾಲ್ವರಿಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರುಗೊಳಿಸಿದೆ. ಐದು ಮಂದಿಯ ಪರವಾಗಿ ವಕೀಲ ಹರೀಶ್ ಶೆಟ್ಟಿ ಪಾಂಗಾಳ ಪ್ರತಿನಿಧಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News