ವಿದ್ಯುತ್ ಉತ್ಪಾದನಾ ಘಟಕದಲ್ಲಿ ತಾಂತ್ರಿಕ ದೋಷ: ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಮಂಗಳೂರು, ಮಾ.20: ಕರ್ನಾಟಕ ವಿದ್ಯುಚ್ಛಕ್ತಿ ನಿಗಮ (ಕೆಪಿಸಿ), ಯುಪಿಸಿಎಲ್ ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕೆಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಇದರಿಂದ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕೆಪಿಸಿಯಿಂದ ಸುಮಾರು 2,864 ಮೆಗಾವ್ಯಾಟ್, ಯುಪಿಸಿಎಲ್‌ನಿಂದ 1,010 ಮೆ.ವ್ಯಾ. ಮತ್ತು ಕೇಂದ್ರೀಯ ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ 407 ಮೆ.ವ್ಯಾ. ಹೀಗೆ ರಾಜ್ಯದ ವಿದ್ಯುತ್ ಜಾಲವು 4,281 ಮೆ.ವ್ಯಾ. ಪ್ರಮಾಣದ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ. ಈ ಪೈಕಿ ಮೆಸ್ಕಾಂಗೆ ಹಂಚಿಕೆಯಾಗುವ ವಿದ್ಯುತ್ ಪ್ರಮಾಣದಲ್ಲಿ ಸುಮಾರು 200 ಮೆ.ವ್ಯಾ.ನಷ್ಟು ಕೊರತೆಯಾಗುವ ಸಾಧ್ಯತೆ ಇದೆ.
ರಾಜ್ಯ ವಿದ್ಯುತ್ ಸರಬರಾಜು ಕೇಂದ್ರದ (ಎಸ್‌ಎಲ್‌ಡಿಸಿ) ಸೂಚನೆಯಂತೆ ಮೆಸ್ಕಾಂ ವ್ಯಾಪ್ತಿಯ ಮಂಗಳೂರು, ಉಡುಪಿ, ಶಿವಮೊಗ್ಗ. ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಗಳಲ್ಲಿ ವಿದ್ಯುತ್ ಜಾಲದ ಸುರಕ್ಷತೆಯ ದೃಷ್ಟಿಯಿಂದ ಅನಿಯಮಿತವಾಗಿ ವಿದ್ಯುತ್ ಪೂರೈಕೆಯಲ್ಲಿ ಈಗಾಗಲೇ ವ್ಯತ್ಯಯ ಕಂಡು ಬರಲಿದೆ. ನೀರಾವರಿ ಪಂಪ್‌ಸೆಟ್‌ಗಳಿಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಮತ್ತು ಮಧ್ಯ ರಾತ್ರಿಯಿಂದ ನಸುಕಿನಜಾವ 4 ಗಂಟೆವರೆಗೆ ಮಾತ್ರ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ.
ಮುಂದಿನ ವಾರದ ವೇಳೆಗೆ ವಿದ್ಯುತ್ ಉತ್ಪಾದನೆಯಲ್ಲಿ ಸುಧಾರಣೆ ನಿರೀಕ್ಷಿಸಲಾಗಿದೆ. ಅಲ್ಲಿಯವರೆಗೆ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗುವ ಸಾಧ್ಯತೆ ಇರುವುದರಿಂದ ಗ್ರಾಹಕರು ಸಹಕರಿಸಲು ಮೆಸ್ಕಾಂ ಪ್ರಕಟನೆಯಲ್ಲಿ ತಿಳಿಸಿದೆ.