ದಕ ಜಿಲ್ಲೆಯ ಸಹಕಾರಿ ವ್ಯವಸ್ಥೆ ರಾಜ್ಯದೆಲ್ಲೆಡೆ ಅನುಸರಿಸಲು ನಿರ್ಧಾರ: ಶಾಸಕ ಬೆಳ್ಳಿಪ್ರಕಾಶ್
ಪಡುಬಿದ್ರಿ : ಇಡೀ ದೇಶಕ್ಕೆ ದಕ ಜಿಲ್ಲಾ ಸಹಕಾರಿ ಬ್ಯಾಂಕ್‍ಗಳು ಮಾನದಂಡವಾಗಿದೆ. ಸಹಕಾರ ಕ್ಷೇತ್ರಗಳಲ್ಲಿ ಅವಿಭಜಿತ ದಕ ಜಿಲ್ಲೆಯ ಸಾಧಿಸಿದ ಪ್ರಗತಿ ಅದ್ಭುತವಾಗಿದೆ. ಇಲ್ಲಿನ ವ್ಯವಸ್ಥೆಯನ್ನು ತಿಳಿದು ರಾಜ್ಯದೆಲ್ಲೆಡೆ ಅನುಸರಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಅಪೆಕ್ಸ್ ಅಧ್ಯಕ್ಷ ಹಾಗೂ ಕಡೂರು ಶಾಸಕ ಬೆಳ್ಳಿಪ್ರಕಾಶ್ ಹೇಳಿದರು.
ನಬಾರ್ಡ್ ನಿಯೋಜಿತ ರಾಜ್ಯ ಅಪೆಕ್ಸ್ ಬ್ಯಾಂಕ್ ಸಹಿತ ರಾಜ್ಯ ಸಹಕಾರಿ ಬ್ಯಾಂಕ್‍ಗಳ ಮುಖ್ಯಸ್ಥರನ್ನೊಳಗೊಂಡ ಅಧ್ಯಯನ ತಂಡವು ಶನಿವಾರ ಪಡುಬಿದ್ರಿಯ ಸಹಕಾರಿ ವ್ಯವಸಾಯಿಕ ಸೊಸೈಟಿಗೆ ಭೇಟಿ ನೀಡಿದ ಸಂದರ್ಭ ಅವರು ಮಾತನಾಡಿದರು.
ಇಲ್ಲಿನ ಸಹಕಾರಿ ಸಂಸ್ಥೆಗಳಿಗೆ ಭೇಟಿ ನೀಡಿದಾಗ ಅಂತರಾಷ್ಟ್ರೀಯ ಬ್ಯಾಂಕ್‍ಗಳಿಗೆ ಹೋದ ಅನುಭವವಾಗಿದೆ. ಡಾ.ಎಮ್.ಎನ್.ರಾಜೇಂದ್ರ ಕುಮಾರ್ ಅವರು ಸಹಕಾರ ರಂಗವನ್ನು ಇಡೀ ರಾಷ್ಟ್ರಕ್ಕೆ ತೋರಿಸಿದವರು. ಇಂದು ದೇಶದ ಸಹಕಾರಿ ಕ್ಷೇತ್ರಕ್ಕೆ ಅಂತರಾಷ್ಟ್ರೀಯ ಮನ್ನಣೆ ದೊರಕಿದ್ದರೆ ಅದಕ್ಕೆ ಡಾ.ರಾಜೇಂದ್ರ ಕುಮಾರ್ ಕಾರಣ. ಮುಂದೆ ಅವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಸಹಕಾರಿ ಕ್ಷೇತ್ರ ಬೆಳೆಸಲು ಪರಿಣಾಮಕಾರಿ ಕ್ರಮಕೈಗೊಳ್ಳಲಾಗುವುದು ಎಂದವರು ಹೇಳಿದರು.
ಉಡುಪಿ ಜಿಲ್ಲಾ ಸಹಕಾರಿ ಬ್ಯಾಂಕ್ಗಳ ಅಧ್ಯಕ್ಷರುಗಳು ಸೇರಿದ್ದ ಸಮಾರಂಭದಲ್ಲಿ ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್ ರವರು ಕಳೆದ 15 ವರ್ಷಗಳಲ್ಲಿ ಸೊಸೈಟಿ ಸಾಧಿಸಿದ ಅದ್ಭುತ ಪ್ರಗತಿಯನ್ನು ಸಾಕ್ಷ್ಯ ಚಿತ್ರ ಮೂಲಕ ವಿವರಿಸಿದರು.
ಸನ್ಮಾನ: ಇದೇ ಸಂದರ್ಭ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಮತ್ತು ಎಸ್‍ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಮ್.ಎನ್.ರಾಜೇಂದ್ರ ಕುಮಾರ್ ರವರನ್ನು ಪಡುಬಿದ್ರಿ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭ ಅಧ್ಯಯನ ತಂಡದ ಎಲ್ಲಾ ಸದಸ್ಯರನ್ನು ಗೌರವಿಸಲಾಯಿತು.
ಚೆಕ್ ವಿತರಣೆ: ಎರ್ಮಾಳು ಬಳಿ ಮನೆ ಮಾಲೀಕರ ಬ್ಯಾಂಕ್ ಸಾಲದಿಂದಾಗಿ ಮನೆ ಖಾಲಿ ಮಾಡಲ್ಪಟ್ಟ ಕಲ್ಯಾಣಿ ದೇವಾಡಿಗ ಕುಟುಂಬಕ್ಕೆ ಎಸ್‍ಸಿಡಿಸಿಸಿ ಬ್ಯಾಂಕ್ ವತಿಯಿಂದ ರೂ.2 ಲಕ್ಷ ನೀಡಲಾಗಿದ್ದು ಸಮಾರಂಭದಲ್ಲಿ ಬೆಳ್ಳಿಪ್ರಕಾಶ್ ಕುಟುಮಬ ಸದಸ್ಯರಿಗೆ ವಿತರಿಸಿದರು.
ಉಡುಪಿ ಜಿಲ್ಲಾ ಕೃಷಿಪತ್ತಿನ ಅಧ್ಯಕ್ಷ ಇಂದ್ರಾಳಿ ಜಯಕರ ಶೆಟ್ಟಿ, ಬೆಳಪು ಸಿಎ ಬ್ಯಾಂಕ್ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಪಡುಬಿದ್ರಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ, ನಿರ್ದೇಶಕರುಗಳಾದ ರಸೂಲ್ ವೈ.ಜಿ., ಶಿವರಾಮ ಎನ್.ಶೆಟ್ಟಿ, ವಾಸುದೇವ ದೇವಾಡಿಗ, ಮಾಧವ ಆಚಾರ್ಯ, ರಾಜಾರಾಮ್ ರಾವ್, ಸುಚರಿತ ಎಲ್.ಅಂಚನ್, ಕುಸುಮಾ ಎಮ್.ಕರ್ಕೇರ, ಗಿರೀಶ್ ಪಲಿಮಾರ್, ಸ್ಟ್ಯಾನಿ ಕ್ವಾಡ್ರಸ್, ಯಶವಂತ್ ಪಿ.ಬಿ., ಶ್ರೀಮತಿ ಕಾಂಚನಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್. ಉಪಸ್ಥಿತರಿದ್ದರು.