ಬೆಳ್ತಂಗಡಿ: ತನ್ನದೇ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಎಂಜಿನಿಯರ್ ಅಪಘಾತಕ್ಕೆ ಬಲಿ
ಬೆಳ್ತಂಗಡಿ, ಮಾ.22: ತನ್ನದೇ ಸ್ವಂತ ಕಚೇರಿ ಉದ್ಘಾಟನೆಗೆ ತೆರಳುತ್ತಿದ್ದ ಯುವ ಎಂಜಿನಿಯರ್ ಒಬ್ಬರು ರಸ್ತೆ ಅಪಘಾತಕ್ಕೆ ಬಲಿಯಾದ ಘಟನೆ ಸೋಮವಾರ ಬೆಳಗ್ಗೆ ತಾಲೂಕಿನ ಮಾಲಾಡಿ ಸಮೀಪ ಅರ್ಕುಲ ಎಂಬಲ್ಲಿ ನಡೆದಿದೆ.
ಬಂಟ್ವಾಳ ತಾಲೂಕು ಬಾಂಬಿಲ ಸನಿಹದ ಮದ್ದ ನಿವಾಸಿ ಮಾಝಿನ್ (26) ಎಂಬವರೇ ಮೃತಪಟ್ಟವರು.
ಬೆಳ್ತಂಗಡಿ ತಾಲೂಕಿನ ಮಾಲಾಡಿ ಸಮೀಪ ಅರ್ಕುಲ ತಿರುವಿನಲ್ಲಿ ಇವರ ಬೈಕಿಗೆ ಯಾವುದೋ ವಾಹನ ಢಿಕ್ಕಿ ಹೊಡೆದು ಪರಾರಿಯಾಗಿದೆ. ರಸ್ತೆಯಲ್ಲಿ ಬೈಕ್ ಉರುಳಿ, ಅದರ ಪಕ್ಕದಲ್ಲೇ ವ್ಯಕ್ತಿಯೊಬ್ಬರು ಬಿದ್ದಿರುವುದನ್ನು ಕಂಡ ಸ್ಥಳೀಯರು ತಕ್ಷಣ ಗಾಯಾಳುವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಮದ್ದಡ್ಕದಲ್ಲಿ ತನ್ನದೇ ಕಚೇರಿ ಉದ್ಘಾಟನೆಯ ಎಲ್ಲಾ ತಯಾರಿ ಮುಗಿಸಿಕೊಂಡಿದ್ದ ಮಾಝಿನ್ ಅತಿಥಿಗಳು ಆಗಮಿಸುವ ಮುನ್ನ ವಸ್ತ್ರ ಬದಲಾಯಿಸಿ ಬರಲೆಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎಂದು ಮೃತರ ಸ್ನೇಹಿತರು ಮಾಹಿತಿ ನೀಡಿದ್ದಾರೆ.
ಪೂಂಜಾಲಕಟ್ಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.